ನವದೆಹಲಿ: ರಸ್ತೆ ಅಪಘಾತಗಳಾದಾಗ ಸಂತ್ರಸ್ತರ ನೆರವಿಗೆ ಧಾವಿಸುವ ಮೂರನೇ ವ್ಯಕ್ತಿಗೆ 25,000 ರೂ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಪಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ.ಎಷ್ಟೋ ಪ್ರಕರಣಗಳಲ್ಲಿ ಗಂಭೀರ ಗಾಯವಾಗಿ ಜೀವ ಹೋಗುತ್ತಿದ್ದರೂ ಯಾರೂ ನೆರವಿಗೆ ಮುಂದಾಗದೆ ಪ್ರಾಣ ಬಿಟ್ಟ ಹಲವು ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಸಹಾಯ ಮನೋಭಾವನೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಅಪಘಾತದಿಂದ, ಅಥವಾ ಅಪಘಾತದ ಬಳಿಕ ವ್ಯಕ್ತಿಯು ಯಾವುದೇ ಆಸ್ಪತ್ರೆಗೆ ದಾಖಲಾದರೆ, ಅವರಿಗೆ ಒಂದೂವರೆ ಲಕ್ಷ ರೂವರೆಗೂ ಧನಸಹಾಯ ನೀಡಲಾಗುವುದು. ಅಥವಾ ಏಳು ವರ್ಷಗಳವರೆಗೆ ವೈದ್ಯರಿಂದ ಆಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ದೇಶದಲ್ಲಿ ವರ್ಷಕ್ಕೆ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಜಿಡಿಪಿಗೆ ಶೇ. 3 ನಷ್ಟವಾಗುತ್ತದೆ ಎಂದಿದ್ದಾರೆ. ಸರಿಯಾದ ಡಿಪಿಆರ್ ಇಲ್ಲದೆ ರಸ್ತೆ ನಿರ್ಮಾಣಗೊಂಡಿರುವುದು ಅಪಘಾತಗಳಿಗೆ ಕಾರಣ ಎಂದು ಸಚಿವರು ಹೇಳಿದ್ದಾರೆ.