ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೆಪಿಎಸ್ ಶಾಲೆ, ಗಾಜರಕೋಟ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪದ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರು ಅಂಜಮ್ಮ, ಪವಿತ್ರ, ರೇಖಾ, ಮಾನಸ, ಅರ್ಚನಾ ಹಾಗೂ ಕವಿತಾ ಆಗಿದ್ದಾರೆ. ತಮ್ಮ ಮನೋಜ್ಞ ಜನಪದ ನೃತ್ಯ ಪ್ರದರ್ಶನದ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಈ ಸಾಧನೆ ಮಾಡಿದ್ದಾರೆ.
ಈ ಸಾಧನೆಯಿಂದ ಕೆಪಿಎಸ್ ಶಾಲೆ, ಗಾಜರಕೋಟ್ ಮಾತ್ರವಲ್ಲದೆ ಸಂಪೂರ್ಣ ಗುರುಮಠಕಲ್ ತಾಲೂಕು ಹಾಗೂ ಯಾದಗಿರಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ವಿದ್ಯಾರ್ಥಿನಿಯರು ಮುಂದಿನ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ಯಾದಗಿರಿ ಜಿಲ್ಲೆಗೆ ಮತ್ತಷ್ಟು ಕೀರ್ತಿ ತರುವರು ಎಂಬ ವಿಶ್ವಾಸವನ್ನು ಶಿಕ್ಷಕರು ಹಾಗೂ ಶಾಲಾ ಆಡಳಿತ ವ್ಯಕ್ತಪಡಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಪೋಷಕರು ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಮುಂದಿನ ಸ್ಪರ್ಧೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ವರದಿ : ರವಿ ಬುರನೋಳ್




