ಬೆಳಗಾವಿ : ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿರುತ್ತದೆ. ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೂರ್ತಿಗಳು ಸಂಚರಿಸುವ ರಸ್ತೆಗಳಲ್ಲಿ 64 ಕ್ಕಿಂತ ಹೆಚ್ಚು ಸಣ್ಣ ಮತ್ತು ದೊಡ್ಡ ಆಸ್ಪತ್ರೆಗಳಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಕಾಲಮಿತಿಯೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬೋರಸೆ ಹೇಳಿದರು.
ಸೋಮವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಗಣೇಶ ಉತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಂತಿ ಹಾಗೂ ಸಂಭ್ರಮದ ಗಣೇಶೋತ್ಸವ ಆಚರಣೆಗೆ ಎಲ್ಲ ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳ ಜೊತೆ ಸಭೆ ಕರೆದು ಅಗತ್ಯ ಬಂದೋಬಸ್ತ ಕಲ್ಪಿಸಲು ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ನಗರದ ದೂರುಗಳನ್ನು 48 ಗಂಟೆಗಳಲ್ಲಿ ಕೂಡಲೇ ಪೊಲೀಸ್ ಇಲಾಖೆಯಿಂದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ವಿವಿಧ ಗಣೇಶ ಉತ್ಸವ ಮಹಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ನಗರದಲ್ಲಿ ಈಗಾಗಲೇ ಸುಮಾರು ವರ್ಷಗಳಿಂದ ಗಣೇಶ ಉತ್ಸವ ಪಾರಂಪರಿಕವಾಗಿ ಅದ್ದೂರಿಯಾಗಿ ಆಚರಿಸುತ್ತಾ ಬಂದಿದೆ. ದೇಶದಲ್ಲೇ ಎರಡನೇ ಅತಿ ದೊಡ್ಡ ಗಣೇಶ ಉತ್ಸವ ಆಚರಣೆ ನಮ್ಮ ಜಿಲ್ಲೆಯಲ್ಲಿ ನಡೆಯುತ್ತದೆ. ಗಣೇಶ ಮೂರ್ತಿ ವಿಸರ್ಜನೆಯ ಸುಮಾರು 8 ಹೊಂಡಗಳಿವೆ ಎಲ್ಲವನ್ನೂ ಸ್ವಚ್ಛಗೊಳಿಸಬೇಕು. ಗಣೇಶ ಮಂಟಪಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಬಿ ಬಸರಗಿ, ಡಿಸಿಪಿ ಭರಮನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಮಹಾನಗರ ಪಾಲಿಕೆ ನಗರ ಸೇವಕರು, ವಿವಿಧ ಗಣೇಶ ಮಹಾಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




