ಚಿಕ್ಕೋಡಿ: ಗಣೇಶ ಚತುರ್ಥಿಯಂದು ಹಲವರು ಗಣಪತಿ ಮೂರ್ತಿಯನ್ನು ತಂದು ಪೂಜೆ ಸಲ್ಲಿಸಿ ವಾಡಿಕೆಯಂತೆ ಸ್ವಚ್ಛವಾದ ಕೆರೆ ಅಥವಾ ಹಳ್ಳದಲ್ಲಿ ವಿಸರ್ಜನೆ ಮಾಡುತ್ತಾರೆ. ಆದರೆ ತಾಲೂಕಿನ ಸದಲಗಾ ಪಟ್ಟಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನು ತಿಪ್ಪೆಗೆ ಬಿಸಾಕಿರುವುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಈ ಘಟನೆ ನೋಡಿ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಮೂರ್ತಿಯನ್ನು ನದಿಗೆ ವಿಸರ್ಜನೆ ಮಾಡಲು ಮುಂದಾದಾಗ ಕೆಲವು ಪರಿಸರವಾದಿಗಳು ನದಿಯ ನೀರು ಕಲುಷಿತ ಆಗುವುದು ಬೇಡ ಬೇರೆ ಸ್ಥಳದಲ್ಲಿ ನಾವೇ ವಿಸರ್ಜನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗಿ ತಿಪ್ಪೆಗೆ ಬಿಸಾಕಿದ್ದು ಕಂಡುಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಆ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವೀಡಿಯೊ ಈಗ ಭಾರೀ ವೈರಲ್ ಆಗಿದೆ.
ಈ ಕೃತ್ಯವನ್ನು ಹಿಂದೂ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಪರಿಸರವಾದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.