Ad imageAd image

ಗೃಹಿಣಿಯರಿಗೆ ಬಾಗಿನ ಅರ್ಪಣೆ ಮೂಲಕ ಗಣೇಶ ಪ್ರತಿಷ್ಠಾಪಿಸಿದ ಲಯನ್ಸ್

Bharath Vaibhav
ಗೃಹಿಣಿಯರಿಗೆ ಬಾಗಿನ ಅರ್ಪಣೆ ಮೂಲಕ ಗಣೇಶ ಪ್ರತಿಷ್ಠಾಪಿಸಿದ ಲಯನ್ಸ್
WhatsApp Group Join Now
Telegram Group Join Now

ತುರುವೇಕೆರೆ : ಗೃಹಿಣಿಯರಿಗೆ ಬಾಗಿನ ನೀಡುವ ಮೂಲಕ ಪಟ್ಟಣದ ಲಯನ್ಸ್ ಕ್ಲಬ್ ಗಣೇಶ ಪ್ರತಿಷ್ಠಾಪನೆ ಮಹೋತ್ಸವವನ್ನು ವಿಶೇಷವಾಗಿ ಆಚರಿಸಿ ಗೌರಿ ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದೆ.

ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಭಾದ್ರಪದ ಶುಕ್ಲ ಚತುರ್ಥಿಯಂದು ಗಣಪತಿಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಸಹೋದರರಿಂದ ಬಾಗಿನ ಸಿಗದ ಒಂಭತ್ತು ಮಂದಿ ಗೃಹಿಣಿಯರಿಗೆ ಅರಿಶಿನ, ಕುಂಕುಮ, ಬಳೆ, ಕಜ್ಜಲ, ಎಲೆ, ಅಡಿಕೆ, ಬಾಳೆಹಣ್ಣು, ರವಿಕೆ ಕಣ, ಹೂವು, ದಕ್ಷಿಣೆ ಸೇರಿದಂತೆ ವಿವಿಧ ಪರಿಕರಗಳನ್ನು ಮರದಲ್ಲಿಟ್ಟು ಬಾಗಿನ ಅರ್ಪಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್. ಪರಮೇಶ್ವರಯ್ಯ ಹಾಗೂ ಪದಾಧಿಕಾರಿಗಳ ಪತ್ನಿಯಂದಿರು, ಮಹಿಳೆಯರಿಗೆ ಅರಿಶಿನ, ಕುಂಕುಮ, ಹೂವು ನೀಡಿ ಸಾಂಪ್ರದಾಯಿಕ ಶೈಲಿಯಲ್ಲಿ ಮೊರದ ಬಾಗಿನ ಅರ್ಪಿಸಿದರು. ಬಾಗಿನ ಪಡೆದುಕೊಂಡ ಗೃಹಿಣಿಯರ ಮೊಗದಲ್ಲಿ ಸಂತಸ ಮನೆಮಾಡಿತ್ತು, ತವರು ಮನೆಯಿಂದ ಸಹೋದರ ನೀಡಿದ ಬಾಗಿನ ಪಡೆದ ಸಂಭ್ರಮ ಮಹಿಳೆಯರ ಮುಖದಲ್ಲಿ ಎದ್ದುಕಾಣುತ್ತಿತ್ತು.

ಹಲವು ಗೃಹಿಣಿಯರು ಮಾತನಾಡಿ, ಲಯನ್ಸ್ ಕ್ಲಬ್ ಕೇವಲ ಸೇವೆ ಮಾತ್ರವಲ್ಲ ಸಹೋದರಿಯರ ರಕ್ಷಣೆಯ ಜವಾಬ್ದಾರಿಯನ್ನೂ ತಗೆದುಕೊಳ್ಳುವ ಭರವಸೆಯೊಂದಿಗೆ ಸೌಹಾರ್ದತೆ, ಸಾಮರಸ್ಯೆ, ಸಹೋದರ ಸಹೋದರಿಯರ ಬಾಂದವ್ಯದ ಹೆಗ್ಗುರುತಾದ ಬಾಗಿನ ಅರ್ಪಣೆ ಮಾಡಿರುವುದು ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ಬಾವುಕರಾದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್.ಪರಮೇಶ್ವರಯ್ಯ ಮಾತನಾಡಿ, ಲಯನ್ಸ್ ಕ್ಲಬ್ ಕಳೆದ ೩೫ ವರ್ಷಗಳಿಂದ ನೂರಾರು ರೀತಿಯ ಜನಪರ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅಶಕ್ತರು, ಅಸಹಾಯಕರಿಗೆ, ವಿದ್ಯಾರ್ಥಿಗಳಿಗೆ ಕೈಲಾದ ಸೇವೆ ಮಾಡಿದೆ. ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿ ಗ್ರಾಮೀಣ ಪ್ರದೇಶದ ಅಂಧರ ಬಾಳಿಗೆ ಬೆಳಕಾಗಿದೆ. ಈ ವರ್ಷದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಲಯನ್ಸ್ ಕ್ಲಬ್ ಸಹೋದರಿಯರಿಗೆ ಬಾಗಿನ ಅರ್ಪಿಸುವ ಮೂಲಕ ಸಂಸ್ಕೃತಿ ಉಳಿಸಿ ಬೆಳೆಸುವ ಕಾಯಕದಲ್ಲೂ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ಆಚರಣೆಯ ಬೆಳವಣಿಗೆಗೆ ಕ್ಲಬ್ ಮುಂದಾಗಲಿದೆ ಎಂದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಎ.ನಾಗರಾಜ್, ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ಪದಾಧಿಕಾರಿಗಳಾದ ಗಂಗಾಧರ ದೇವರಮನೆ, ತುಕಾರಾಮ್, ಶ್ರೀನಿವಾಸ್, ಟಿಎವಿ ಗುಪ್ತ, ಸುನಿಲ್ ಬಾಬು ಹಾಗೂ ಲಯನ್ಸ್ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!