ತುರುವೇಕೆರೆ: ತಾಲ್ಲೂಕಿನ ಜೀವನಾಡಿಯೆಂದೇ ಪ್ರಸಿದ್ಧವಾಗಿರುವ ಮಲ್ಲಾಘಟ್ಟ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಗಂಗಾಪೂಜೆ ನೆರವೇರಿಸಿ ಗಂಗಾಮಾತೆಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಮಲ್ಲಾಘಟ್ಟ ಕೆರೆಯು ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದು, ಕೆರೆ ತುಂಬಿ ಹರಿದರೆ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಜನಜಾನುವಾರುಗಳಿಗೆ ಕುಡಿಯಲು ಹಾಗೂ ಕೃಷಿ ಚಟುವಟಿಕೆಗೆ ಅಗತ್ಯವಾದ ನೀರು ಈ ಕೆರೆಯಿಂದಲೇ ಪೂರೈಕೆಯಾಗುವುದರಿಂದ ಜನರ ಜೀವನಾಡಿಯಾಗಿರುವ ಮಲ್ಲಾಘಟ್ಟ ಕೆರೆ ತುಂಬಿ ಕೋಡಿ ಬಿದ್ದಿರುವುದು ಬಹಳ ಹರ್ಷ ತಂದಿದೆ. ಮಲ್ಲಾಘಟ್ಟ ಕೆರೆ ಕೋಡಿ ಹರಿದು ನೀರನ ನಡುವೆ ಜನತೆ ಸಂಚರಿಸಲು ಕಷ್ಟಪಡುವುದನ್ನು ಕಂಡು ಈ ಹಿಂದೆ ಶಾಸಕನಾದ ಸಂದರ್ಭದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸೇತುವೆ ನಿರ್ಮಿಸಲಾಗಿದೆ. ಕೆರೆಯ ಅಭಿವೃದ್ದಿಗೆ ಹಲವಾರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇನೆ. ಮುಂದೆಯೂ ಸಹ ಮಲ್ಲಾಘಟ್ಟ ಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡಲಾಗುವುದು ಎಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾಗಿರುವ ಮಲ್ಲಾಘಟ್ಟ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದರು.
ಮಲ್ಲಾಘಟ್ಟ ಕೆರೆಯು ತುರುವೇಕೆರೆ ಪಟ್ಟಣದ ನಾಗರೀಕರಿಗೆ ಕುಡಿಯುವ ನೀರಿಗೆ ಆಧಾರವಾಗಿದೆ. ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಸಹಸ್ರಾರು ಮಂದಿ ಪ್ರವಾಸಿಗರು ಈ ಸ್ಥಳಕ್ಕೆ ಬಂದು ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ. ಅಲ್ಲದೆ ತಾಲ್ಲೂಕಿನ ಬಹುತೇಕ ಗ್ರಾಮಗಳ ಜನತೆ ಗ್ರಾಮದೇವತೆಯ ಉತ್ಸವ ಮೂರ್ತಿಯನ್ನು ಇಲ್ಲಿಗೆ ಗಂಗಾಸ್ನಾನಕ್ಕೆ ಕರೆತರುತ್ತಾರೆ. ಆದ್ದರಿಂದ ಮಲ್ಲಾಘಟ್ಟ ಕೆರೆಯನ್ನು ಮಲಿನ ಮಾಡದೆ ಕೆರೆ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ, ದೇವಸ್ಥಾನಗಳ ಆಡಳಿತ ಮಂಡಳಿ, ನಾಗರೀಕರು ಅಗತ್ಯ ಕ್ರಮ ವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಆಶಾರಾಜಶೇಖರ್, ಪಪಂ ಸದಸ್ಯ ಸುರೇಶ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಗ್ರಾಪಂ ಅಧ್ಯಕ್ಷೆ ಮಂಜುಶ್ರೀ, ಸದಸ್ಯರಾದ ಪುನೀತ್, ಶಾರದಮ್ಮ, ಇನ್ನರ್ ವೀಲ್ ಅಧ್ಯಕ್ಷೆ ನೇತ್ರಾಸಿದ್ದಲಿಂಗಸ್ವಾಮಿ, ಹೇಮಾವತಿ ಇಂಜಿನಿಯರ್ ಲಕ್ಷ್ಮಯ್ಯ, ಮುಖಂಡರಾದ ಹೊಸಹಳ್ಳಿ ದೇವರಾಜ್, ಶಿವಾನಂದ್, ಪುಟ್ಟೇಗೌಡ, ಚಿದಾನಂದ್, ಸದಾನಂದ್, ಈಶ್ವರಯ್ಯ ಹಾಗೂ ದೇವಾಲಯ ಅಭಿವೃದ್ದಿ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್