ಕೊಪ್ಪಳ: ಜಿಲ್ಲೆಯಲ್ಲಿ ಸಾಕಷ್ಟು ರೀತಿಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಗಂಗಾವತಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಲು ಕೊಂಡ್ಯೊಯುವಾಗ ಸಿಜ್ ಮಾಡಲಾಗಿತ್ತು. ಬಡವರಿಗೆ ವಿತರಣೆ ಆಗಬೇಕಾಗಿರುವ ಪಡಿತರ ಅಕ್ಕಿಯನ್ನ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೋಟ್ಯಾಂತರ ರೂ. ಕೊಳ್ಳೆ ಹೊಡೆಯುವ ಕೆಲಸ ಇಂದಿಗೂ ನಿಂತಿಲ್ಲ.ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿ ನಡಿತಾನೇ ಇದೆ. ಆದರೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ದಂಧೆಗೆ ಮಾತ್ರ ಬ್ರೇಕ್ ಬಿಳುತ್ತಿಲ್ಲ.
ಅದೇ ರೀತಿಯಾಗಿ ಗಂಗಾವತಿ ನಗರದ ಕನಕದಾಸ ವೃತ್ತದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ಪ್ಯಾಸೆಂಜರ್ ಆಟೋ ವಾಹನವನ್ನು ಹಿಡಿದು ಕನ್ನಡ ಪರ ಮತ್ತು ದಲಿತ ಪರ ಸಂಘಟನೆಯ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸೇರಿ ಪೊಲೀಸರಿಗೆ ಒಪ್ಪಿಸಿದಂತಹ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಬಡವರ ಹೊಟ್ಟೆ ಸೇರಬೇಕಿರುವ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಳೆದ ದಿನ ಸಂಜೆ 5:00 ಗೆ ಗಂಗಾವತಿ ನಗರದ ಕನಕದಾಸ ವೃತ್ತದಿಂದ ಶರಣಬಸವೇಶ್ವರ ಕ್ಯಾಂಪಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಕಂಡು ಕನ್ನಡ ಯುವ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಡಿ.ಅಲಿ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಸೈಯದ್ ಅಸ್ಲಾಂ ಸೇರಿ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆಟೋ ಚಾಲಕನಿಗೆ ವಿಚಾರಿಸಿದಾಗ. ಅನ್ನಭಾಗ್ಯ ಅಕ್ಕಿ ಅಕ್ರಮ ದಂದೆಯಲ್ಲಿ ತೊಡಗಿರುವಂತ ಎರಡು ವ್ಯಕ್ತಿಯ ಹೆಸರು ಬೆಳಕಿಗೆ ಬಂದಿದೆ. ಗಂಗಾವತಿ ನಗರದ ಶರಣಬಸವೇಶ್ವರ ಕ್ಯಾಂಪಿನ ಹನುಮಂತ ತಾಳಿಕೇರಿ ಮತ್ತು ಕಾರಟಗಿ ತಾಲೂಕಿನ ಬೂದುಗುಂಪ ಗ್ರಾಮದ ವೀರನಗೌಡ ಎಂದು ಮಾಹಿತಿ ನೀಡಿದ್ದಾನೆ.
ಅಕ್ರಮ ದಂಧೆಯಲ್ಲಿ ತೊಡಗಿರುವಂತ ಹನುಮಂತ ತಾಳಿಕೇರಿ ಮತ್ತು ವೀರನಗೌಡ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಯುವ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಡಿ. ಅಲಿ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಸೈಯದ್ ಅಸ್ಲಾಂ ಅವರು ಒತ್ತಾಯಿಸಿದ್ದಾರೆ.