ಕಂದಗಲ್ ;-ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ದೀಪಾವಳಿ ಪಾಡ್ಯದಂದು ಸ್ಥಾಪಿತ ಗೊಳ್ಳುವ ಗೌರವ್ವಗೆ ಹೆಣ್ಣು ಮಕ್ಕಳು ಸಕ್ಕರೆ ಆರತಿ ಮಾಡುವುದರ ಮೂಲಕ ಗೌರವ ಸಲ್ಲಿಸುವ ಪರಂಪರಾಗತ ಪದ್ಧತಿ ಹಳ್ಳಿಗಳಲ್ಲಿ ಇಂದಿಗೂ ರೂಢಿಯಲ್ಲಿದೆ.
ಗೌರಿ ಹುಣ್ಣಿಮೆ ಬಂತೆಂದರೆ ಹಳ್ಳಿ ಅಂಗಳದಲ್ಲಿ ಎಲ್ಲೆಡೆಯೂ ನಯನಮನೋಹರ ಸಕ್ಕರೆ ಗೊಂಬೆಗಳು ಗೌರವ್ವಳ ಪೂಜೆಗೆ ಆರತಿ ತಾಟುಗಳನ್ನು ಸೇರಲು ಸಿದ್ಧವಾಗಿರುತ್ತವೆ ಗುಡಿ, ತೇರು, ಈಶ್ವರ, ಬಸವಣ್ಣ, ಆನೆ, ಕುದುರೆ, ದೇವತೆಗಳು ಹೀಗೆ ನಾನಾ ಭಾವ ಭಂಗಿಯ ಸಕ್ಕರೆ ಗೊಂಬೆಗಳ ತಯಾರಿ ಗ್ರಾಮದಲ್ಲಿ ಭರ್ಜರಿಯಾಗಿ ನಡೆದಿದೆ.
ಒಂದ ಸೇರ ಎಣ್ಣಿ ತಂದೆನಾ ಗೌರಿ ಒಂದ ದೀವಿಗೆ ಹಚ್ಚೇನ ಗೌರಿ ಬಾರಕ್ಕ್ ಭಾರ ನಾವ ಹಾಡೋಣ ಏಕಾದರುತಿ ಹೆ ಗೌರಿ ಬೆಳಗಾದರೂತಿ ಎಂದು ಹಾಡುತ್ತ ಆರುತಿ ಬೆಳಗಿದಾಗ ಮಹಿಳೆಯರಲ್ಲಿ ಎಲ್ಲಿಲ್ಲದ ಸಂಭ್ರಮ ಇದು ಉತ್ತರ ಕರ್ನಾಟಕದಲಿ ನೆಡೆಯುವ ವಿಶೇಷ ಗೌರಿ ಹಬ್ಬದ ಆಚರಣೆ.
ಹೊಸದಾಗಿ ಮುದುವೆ ಅಗಲಿರುವ ವಧುವಿಗೆ ಹಾಗೂ ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಮಗಳಿಗೆ ಅಕ್ಕ-ತಂಗಿಯರಿಗೆ ಗೌರಿ ಹುಣ್ಣಿಮೆ ಸಂದರ್ಭದಲ್ಲಿ ಸಕ್ಕರೆ ಆರತಿ ಕೊಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತದೆ ಹೊಸದಾಗಿ ಮದುವೆಯಾಗಲಿರುವ ವಧುವಿಗೆ ಬಾವಿ ಗಂಡನ ಮನೆಯವರು ಹೊಸ ಸೀರಿ ಕುಪ್ಪಸ ಸಕ್ಕರೆ ಗೊಂಬೆಗಳನ್ನು ತಂದು ಹೊಸ ಸೀರಿ ಉಡಿಸಿ ತಲೆ ತುಂಬಾ ಹೂ ಹಾಗೂ ದಂಡೆ ಹಾಕಿಕೊಂಡು ಹುಣ್ಣಿಮೆ ದಿನ ಗೌರಿಗೆ ಆರತಿ ಬೆಳಗಿ ದೇವಸ್ಥಾನಕ್ಕೆ ಹೋಗಿ ಬರುವ ವಾಡಿಕೆ ಹಳ್ಳಿಗಳಲ್ಲಿ ಸಾಮಾನ್ಯವಾಗಿರುತ್ತದೆ.
ಸಕ್ಕರೆ ಬೊಂಬೆ ತಯಾರಿಕೆ – ಕಂದಗಲ್ಲ ಗ್ರಾಮದಲ್ಲಿ ವೀರೇಶ ಸಿಂಪಿ, ಬಸವರಾಜ ವೀರಾಪುರ, ರುದ್ರಮ್ಮ ಮಡ್ಡಿಕಂಟಿ, ಶಂಕರ ಶಿಂಪಿ, ಸೇರಿದಂತೆ ಗ್ರಾಮದಲ್ಲಿ ಇನ್ನಿತರರು 10 ದಿನಗಳಿಂದಲು ಸಕ್ಕರೆ ಬೊಂಬೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ ಗೌರಮ್ಮಳಿಗೆ ಸಕ್ಕರೆ ಬೊಂಬೆಗಳು ರೆಡಿಯಾಗಿ ನಿಂತಿವೆ.
ಈ ಭಾಗದಲ್ಲಿ ಗೋನಾಳ ಎಸ್. ಕೆ ಸೋಮಲಾಪುರ ಮರಟಗೇರಿ ನಂದವಾಡಗಿ ಹಿರೇಹೊತಗೇರಿ ಕೋಡಿಹಾಳ್ ಕರಡಿ ಶಿವನಗುತ್ತಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಸಕ್ಕರೆ ಆರತಿ ತಯಾರಿಕೆ ಭರ್ಜರಿ ನೆಡೆದಿದ್ದು ಮಾರಾಟವು ಜೋರಾಗಿದೆ
ವರದಿ ದಾವಲ್ ಶೇಡಂ