ಕೊಪ್ಪಳದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಹಾರಥೋತ್ಸವವು ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕೊಪ್ಪಳ: ಲಕ್ಷಾಂತರ ಭಕ್ತರ ಉದ್ಘೋಷದ ನಡುವೆ ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರುವಾಸಿಯಾಗಿರುವ ಕೊಪ್ಪಳ ಪ್ರಸಿದ್ದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಬುಧವಾರ ಜರುಗಿತು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಾಂಗವಾಗಿ ರಥೋತ್ಸವ ನೆರವೇರಿತು. ಉತ್ತರ ಕರ್ನಾಟಕ ಮಾತ್ರವಲ್ಲದೇ ನಾಡಿನ ನಾನಾ ಭಾಗಗಳು, ಹೊರ ರಾಜ್ಯಗಳಿಂದಲೂ ಬಂದಿದ್ದ ಭಕ್ತರ ಸಮ್ಮುಖದಲ್ಲಿ ಮಹಾ ರಥವನ್ನು ಎಳೆಯಲಾಯಿತು. ವರ್ಷದಿಂದ ವರ್ಷಕ್ಕೆ ಕೊಪ್ಪಳದ ಅಜ್ಜನ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಹತ್ವದ ರಥೋತ್ಸವಕ್ಕೆ ಸಾಕ್ಷಿಯಾದರು. ಅದರಲ್ಲೂ ಬುಧವಾರ ಬೆಳಿಗ್ಗೆಯಿಂದಲೇ ನಾನಾ ಕಡೆಯಿಂದಲೂ ನಡೆದುಕೊಂಡೇ ಕೊಪ್ಪಳಕ್ಕೆ ಬಂದ ಭಕ್ತರು ರಥೋತ್ಸವದ ಕ್ಷಣಗಳನ್ನು ಕಣ್ತುಂಬಿಕೊಂಡರು. ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾದ ಒಂದು ಸಾವಿರಕ್ಕೂ ಮಿಗಿಲಾದ ಇತಿಹಾಸ ಇರುವ ಗವಿಸಿದ್ದೇಶ್ವರ ರಥೋತ್ಸವಕ್ಕೆ ಜಾತಿ, ಧರ್ಮಗಳನ್ನು ಮೀರಿ ಭಕ್ತರು ಪಾಲ್ಗೊಳ್ಳುತ್ತಾರೆ.
ಶ್ರೀ ಗವಿಸಿದ್ದೇಶ್ವರ ರಥೋತ್ಸವಕ್ಕೆ ನಿರಂತರ ಮೂರು ತಿಂಗಳಿನಿಂದಲೂ ತಯಾರಿ ನಡೆಸಲಾಗುತ್ತದೆ. ಈ ಬಾರಿಯೂ ತಯಾರಿ ನಡುವೆಯೂ ಜಾತ್ರೆ ಶುರುವಾಗಿತ್ತು. ಬುಧವಾರ ಮಹಾರಥೋತ್ಸವ. ಗವಿಮಠದ ಮಹಾರಥೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ಅಲಂಕಾರ, ವಿಶೇಷ ಪೂಜೆಗಳು ಬೆಳಗ್ಗೆಯಿಂದಲೇ ನೆರವೇರಿದವು. ಆನಂತರ ರಥೋತ್ಸವಕ್ಕೂ ಪೂಜೆಗಳು ಸಲ್ಲಿಕೆಯಾದವು. ಸಂಜೆ 5ಕ್ಕೆ ರಥೋತ್ಸವ ನಿಗದಿಯಾಗಿದ್ದರಿಂದ ಬೆಳಿಗ್ಗೆಯಿಂದಲೇ ದೂರದ ಊರುಗಳಿಂದ ಮಕ್ಕಳು, ಹಿರಿಯರೊಂದಿಗೆ ಕುಟುಂಬದ ಸದಸ್ಯರು ಆಗಮಿಸಿದ್ದರು. ರಥವನ್ನು ಎರಡು ಮೂರು ದಿನಗಳಿಂದಲೇ ಅಲಂಕರಿಸಲಾಗಿತ್ತು. ಬುಧವಾರ ಎಲ್ಲಾ ಸಿದ್ದತೆಗಳು ಪೂರ್ಣಗೊಂಡ ನಂತರ ಸಂಜೆ 5 ಗಂಟೆ ವೇಳೆಗೆ ಧರ್ಮಗುರುಗಳು, ಗಣ್ಯರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ಈ ವೇಳೆ ಉತ್ತುತ್ತಿ. ಹಣ್ಣುಗಳನ್ನು ಎಸೆದು ಜನರು ಭಕ್ತಿ ಭಾವ ಮೆರೆದರು.
ಭಾರೀ ಭದ್ರತೆ, ಸಂಚಾರ ಬದಲಾವಣೆ ಲಕ್ಷಾಂತರ ಭಕ್ತರು ಕೊಪ್ಪಳದ ಮಧ್ಯೆ ಭಾಗದಲ್ಲಿಯೇ ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ್ದರಿಂದ ಸಹಜವಾಗಿಯೇ ಸಂಚಾರಕ್ಕೆ ವ್ಯತ್ಯಯವಾಗುತ್ತದೆ. ಈ ಬಾರಿಯೂ ಕೊಪ್ಪಳ ಪೊಲೀಸರು ಎಲ್ಲಾ ಭಾಗಗಳಲ್ಲೂ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟು ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ನೋಡಿಕೊಂಡರು. ವಾಹನ ಸವಾರರು ನಗರದೊಳಗೆ ಬಾರದಂತೆ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೇ ಸಂಚಾರ ಪೊಲೀಸರನ್ನೂ ನಿಯೋಜಿಸಲಾಗಿತ್ತು.
ದಾಸೋಹದ ಸವಿ ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ದಾಸೋಹವೂ ವಿಶೇಷ ಆಕರ್ಷಣೆ. ಮಠ ಹಾಗೂ ಜಾತ್ರೆಗೆ ಬರುವ ಭಕ್ತರು ಎಂದೂ ಉಪವಾಸ ಹೋಗಬಾರದು ಎನ್ನುವ ಕಾರಣದಿಂದ ಇಲ್ಲಿ ದಾಸೋಹ ನಿರಂತರವಾಗಿ ಇರಿಸಲಾಗುತ್ತದೆ. ಇದಕ್ಕಾಗಿ ಭಕ್ತರು ನೀಡುವ ರೊಟ್ಟಿ ಸಹಿತ ಹಲವು ರೀತಿ ಭಕ್ಷ್ಯಗಳನ್ನು ಉಣಬಡಿಸಲಾಗುತ್ತದೆ. ಅಲ್ಲದೇ ಪ್ರತಿವರ್ಷವೂ ಒಂದೊಂದು ರೀತಿಯಲ್ಲಿ ಸಿಹಿ ತಿನಿಸು ಮಾಡುವ ಸಿಂಧನೂರಿನ ಸಮಾನ ಮನಸ್ಕ ಸ್ನೇಹಿತರು, ಮಠದ ಭಕ್ತರಿಗಾಗಿ ಈ ಬಾರಿ ಲಕ್ಷಾಂತರ ಜಿಲೇಬಿಗಳನ್ನು ತಯಾರಿಸಿದ್ದಾರೆ. ಬುಧವಾರ ಮಠದ ಸಮೀಪದಲ್ಲಿಯೇ ಜಿಲೇಬಿ ತಯಾರಿಸುವ ಚಟುವಟಿಕೆ ನಡೆದಿದ್ದರೆ, ಮತ್ತೊಂದು ಕಡೆ ಪ್ರಸಾದೊಂದಿಗೆ ಜಿಲೇಬಿಯನ್ನು ಭಕ್ತರು ಸವಿದರು
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆ, ಕಲ್ಯಾಣ ಕರ್ನಾಟಕ ಭಾಗ ಮಾತ್ರವಲ್ಲದೆ, ರಾಜ್ಯದಲ್ಲಿಯೇ ಪ್ರಮುಖ ಜಾತ್ರಾ ಮಹೋತ್ಸವಗಳಲ್ಲಿ ಪ್ರಮುಖ ಹೆಸರು ಪಡೆದಿದೆ. ಇದನ್ನು ರೊಟ್ಟಿ ಜಾತ್ರೆ ಎಂದೂ ಕರೆಯಲಾಗುತ್ತದೆ. ಜಾತ್ರೆಯ ಭಾಗವಾಗಿ 15 ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನು ಸಂಗ್ರಹಿಸಿ ಭಕ್ತರಿಗೆ ಉಣಬಡಿಸಲಾಗಿದೆ. ಜಾತ್ರೆ ಆರಂಭವಾಗುವ 15 ದಿನಗಳ ಮೊದಲಿನಿಂದಲೂ ಈ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಎಲ್ಲ ಧರ್ಮಗಳ ಹಾಗೂ ಜಾತಿಗಳ ಜನ ರೊಟ್ಟಿ ತಟ್ಟಿ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕೆಲವರು ತಮ್ಮ ಮನೆಗಳಲ್ಲಿ ರೊಟ್ಟಿಗಳನ್ನು ತಯಾರಿಸಿ ಗ್ರಾಮದ ದೇವಸ್ಥಾನದಲ್ಲಿ ಸಂಗ್ರಹಿಸಿ ಅದ್ದೂರಿ ಮೆರವಣಿಗೆ ಮೂಲಕ ಗವಿಮಠಕ್ಕೆ ಅರ್ಪಿಸಿದ್ದು,. ಅವುಗಳನ್ನು ಇಂದು ಭಕ್ತರಿಗೆ ಉಣಬಡಿಸಲಾಯಿತು.
ಗವಿಶ್ರೀ ಕ್ರೀಡೋತ್ಸವ ಮೆರಗು ನಾಲ್ಕು ದಿನಗಳಿಂದಲೂ ಜಾತ್ರೆ ಅಂಗವಾಗಿ ನಾನಾ ಕ್ರೀಡಾ ಸ್ಪರ್ಧೆಗಳು ನಡೆದಿವೆ. ವಿಶೇಷವಾಗಿ ದೇಸಿ ಆಟಗಳಿಗೆ ಒತ್ತು ನೀಡಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳುವಂತೆ ಗವಿಶ್ರೀ ಕ್ರೀಡೋತ್ಸವ ಗಮನ ಸೆಳೆಯುತ್ತಿದೆ. ಜಾತ್ರೆಯ ದಿನವಾದ ಬುಧವಾರ ಕೂಡ ಹಲವು ಆಟೋಟ ಸ್ಪರ್ಧೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಮಲ್ಲಗಂಬ, ಮುಂಗೈ ಕುಸ್ತಿ, ಕಬ್ಬಡ್ಡಿ, ಕಲ್ಲೆತ್ತುವುದು. ಬಂಡಿ ಓಟ ಸೇರಿದಂತೆ ವಿವಿಧ ಕ್ರೀಡೆಗಳನ್ನ ಶ್ರೀಮಠದ ಆವರಣದಲ್ಲಿ ಈ ಬಾರಿ ಆಯೋಜಿಸಲಾಗಿದೆ. ಮಹಿಳೆಯರಿಗಾಗಿ ವಿಶೇಷವಾಗಿ ರಂಗೋಲಿ ಸ್ಪರ್ಧೆಯೂ ಇದೆ. ವಿಜೇತರಿಗೆ ನಗದು ಬಹುಮಾನವನ್ನೂ ನೀಡಲಾಗುತ್ತಿದೆ.
ಹೆಚ್ಚುವರಿ ಬಸ್ ಸೇವೆ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ಭಕ್ತಾದಿಗಳಿಗಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಹೆಚ್ಚುವರಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈಗಾಗಲೇ ಕೊಪ್ಪಳಕ್ಕೆ ಬಸ್ ಸೇವೆ ಆರಂಭಗೊಂಡಿದು. ಇನ್ನೂ ಎರಡು ವಾರಗಳ ಕಾಲ ವಿಶೇಷ ಬಸ್ ಸೇವೆ ಇರಲಿದೆ.
ಕೊಪ್ಪಳದಲ್ಲಿ ಜನವರಿ 15 ರಿಂದ ಜ. 29 ರವರೆಗೆ ನಡೆಯಲಿರುವ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕುಷ್ಟಗಿ, ಗಂಗಾವತಿ, ಯಲಬುರ್ಗಾ, ಗದಗ, ಮುಂಡರಗಿ, ಹೊಸಪೇಟೆ ಇನ್ನೂ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ. ಭಕ್ತಾದಿಗಳು ಈ ಸಾರಿಗೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.