ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ 540 ಕೋಟಿ ವೀಕ್ಷಣೆಗಳು ಮತ್ತು ಸುಮಾರು 11,000 ಕೋಟಿ ನಿಮಿಷಗಳ ವೀಕ್ಷಣೆ ಸಮಯದೊಂದಿಗೆ ಜಿಯೋ ಹಾಟ್ ಸ್ಟಾರ್ ಭಾರತದ ಲೈವ್ ಸ್ಪೋರ್ಟ್ಸ್ ಸ್ಟ್ರೀಮಿಂಗ್ನಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ಅದ್ಭುತ ಪ್ರಯಾಣವಾಗಿತ್ತು. 540 ಕೋಟಿಗೂ ಅಧಿಕ ವೀಕ್ಷಣೆಗಳು, 11,000 ಕೋಟಿ ನಿಮಿಷಗಳ ವೀಕ್ಷಣೆ ಸಮಯ ಮತ್ತು 6.12 ಕೋಟಿ ಗರಿಷ್ಠ ಕನ್ಕರೆನ್ಸಿ ಸಂಖ್ಯೆಯೊಂದಿಗೆ, ಈ ಸಂಖ್ಯೆಗಳು ಭಾರತದಲ್ಲಿ ಡಿಜಿಟಲ್ ಸ್ಟ್ರೀಮಿಂಗ್ನ ಪ್ರಮಾಣ, ಉತ್ಸಾಹ ಮತ್ತು ವಿಕಾಸದ ಶಕ್ತಿಯುತ ಕಥೆ ಹೇಳುತ್ತವೆ ಎಂದು ಜಿಯೋಸ್ಟಾರ್ನ ಡಿಜಿಟಲ್ ಸಿಇಒ ಕಿರಣ್ ಮಣಿ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ.
124 ಕೋಟಿ ವೀಕ್ಷಣೆ ಪಡೆದ ಫೈನಲ್ ಪಂದ್ಯ: ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತವು ತನ್ನ ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಅಂತಿಮ ಪಂದ್ಯಕ್ಕೆ ಜಿಯೋ ಹಾಟ್ ಸ್ಟಾರ್ನಲ್ಲಿ ಅಭೂತಪೂರ್ವ 124.2 ಕೋಟಿ ವೀಕ್ಷಣೆಗಳು ಬಂದಿವೆ. ಈ ಪಂದ್ಯವು 6.12 ಕೋಟಿ ಗರಿಷ್ಠ ಏಕಕಾಲಿಕ ವೀಕ್ಷಕರೊಂದಿಗೆ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಹಿಂದೆ 2023ರ ವಿಶ್ವಕಪ್ ಫೈನಲ್ ಪಂದ್ಯವನ್ನು ಡಿಸ್ನಿ ಹಾಟ್ ಸ್ಟಾರ್ ಪ್ರಸಾರ ಮಾಡಿದಾಗ 5.9 ಕೋಟಿ ಏಕಕಾಲಿಕ ಸ್ಟ್ರೀಮಿಂಗ್ ದಾಖಲೆ ನಿರ್ಮಿಸಲಾಗಿತ್ತು.
ಪಾಕ್ Vs ಇಂಡಿಯಾ ಪಂದ್ಯಕ್ಕೆ 60.2ಕೋಟಿ ಸ್ಟ್ರೀಮಿಂಗ್: ಈ ವರ್ಷ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೆ ಜಿಯೋ ಹಾಟ್ ಸ್ಟಾರ್ನಲ್ಲಿ ಒಟ್ಟಾರೆ 90 ಕೋಟಿ ವೀಕ್ಷಣೆಗಳು ಬಂದಿವೆ. ಹಾಗೆಯೇ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದ ಪಂದ್ಯ ಒಟ್ಟು 66.9 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪಾಕಿಸ್ತಾನ ವಿರುದ್ಧದ ಭಾರತದ ಪಂದ್ಯಕ್ಕೆ 60.2 ಕೋಟಿ ಸ್ಟ್ರೀಮಿಂಗ್ ವೀಕ್ಷಣೆಗಳು ಬಂದಿವೆ.
ಹಿಂದಿ ಮಾತನಾಡುವ ಪ್ರದೇಶದಿಂದ ಶೇ 38ರಷ್ಟು ಕೊಡುಗೆ: ಈ ವರ್ಷದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯದ ಸಮಯದಲ್ಲಿ ಅತ್ಯಧಿಕ ಚಂದಾದಾರರನ್ನು ಗಳಿಸುವ ಮೂಲಕ ಜಿಯೋ ಹಾಟ್ಸ್ಟಾರ್ ಮತ್ತೊಂದು ದಾಖಲೆ ಮಾಡಿದೆ. ಪಂದ್ಯಾವಳಿಯ ಸಮಯದಲ್ಲಿ ಹಿಂದಿ ಮಾತನಾಡುವ ಪ್ರದೇಶಗಳು ಜಿಯೋಹಾಟ್ಸ್ಟಾರ್ನ ಒಟ್ಟು ವೀಕ್ಷಕರಲ್ಲಿ ಶೇಕಡಾ 38 ಕ್ಕಿಂತ ಹೆಚ್ಚು ಕೊಡುಗೆ ನೀಡಿವೆ. ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಗೋವಾ, ಪಂಜಾಬ್ ಮತ್ತು ಹರಿಯಾಣ ಕೂಡ ಬಳಕೆಯಲ್ಲಿ ಮುಂಚೂಣಿಯಲ್ಲಿವೆ.
ಡಿಸ್ನಿಯ ಸ್ಟಾರ್ ಇಂಡಿಯಾವನ್ನು ರಿಲಯನ್ಸ್ನ ವಯಾಕಾಮ್ 18 ಮತ್ತು ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ಗಳಾದ ಜಿಯೋ ಸಿನೆಮಾ ಮತ್ತು ಹಾಟ್ಸ್ಟಾರ್ ನೊಂದಿಗೆ ವಿಲೀನಗೊಳಿಸುವ 8.5 ಬಿಲಿಯನ್ ಡಾಲರ್ ಒಪ್ಪಂದದ ಮೂಲಕ ಜಿಯೋ ಸ್ಟಾರ್ ಅನ್ನು ರಚಿಸಲಾಗಿದೆ.