ಬೆಳಗಾವಿ: ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಜಲಾಶಯದಿಂದ ನೀರು ಪೂರೈಸಲು ಆರಂಭಿಸಿರುವ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ) ಬಣ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ರವಾನಿಸಲಾಯಿತು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದ ವರೆಗೆ ಅರೆ ಬೆತ್ತಲೆ ಮೆರವಣಿಗೆ ಮೂಲಕ ತೆರಳಿದ ನೂರಾರು ಕರವೇ ಕಾರ್ಯಕರ್ತರು, ಚನ್ನಮ್ಮ ವೃತ್ತದಲ್ಲಿ ಕೆಲ ನಿಮಿಷಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ರಸ್ತೆ ಯುದ್ದಕ್ಕೂ ಜಲ ಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ವೇಳೆ ಟೈಯರ್ ಗೆ ಬೆಂಕಿ ಹಚ್ಚಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆಗ ಪೊಲೀಸರು ಮತ್ತು ಕರವೇ ಕಾರ್ಯಕರ್ತರು ನಡುವೆ ನೂಕಾಟ ತಳ್ಳಾಟ ನಡೆಯಿತು. ಅಲ್ಲದೆ, ಮತ್ತೆ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆಯೂ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟ ನಡೆಯಿತು.
ವರದಿ: ಮಹಾಂತೇಶ ಎಸ್ ಹುಲಿಕಟ್ಟಿ




