ಮ್ಯಾಂಚೆಸ್ಟರ್ : ಕೆ.ಎಲ್. ರಾಹುಲ್ ಹಾಗೂ ನಾಯಕ ಶುಭಮಾನ್ ಗಿಲ್ ಅವರ ಮುರಿಯದ ನಾಲ್ಕನೇ ವಿಕೆಟ್ ಗೆ ಕೂಡಿ ಹಾಕಿದ 174 ರನ್ ಪಾಲುಗಾರಿಕೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಲು ಉತ್ತಮ ಯತ್ನ ನಡೆಸಿದೆ.
ಎಮಿರೆಟ್ಸ್ ಓಲ್ ಟ್ರೆಪಿಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ದಿನದಾಟ ಮುಗಿದಾಗ ಭಾರತ ತನ್ನ ದ್ವಿತೀಯ ಸರದಿಯಲ್ಲಿ 2 ವಿಕೆಟ್ ಗೆ 174 ರನ್ ಗಳಿಸಿದ್ದು, ಇಂಗ್ಲೆಂಡ್ ನ ಮುನ್ನಡೆಯನ್ನು ಅಳಿಸಿ ಹಾಕಲು ಉಳಿದ ಎಂಟು ವಿಕೆಟ್ ಗಳಿಂದ ಇನ್ನು 137 ರನ್ ಗಳಿಸಬೇಕಿದೆ. ಆರಂಭ ಆಟಗಾರನಾಗಿ ಆಡಲು ಬಂದ ಕೆ.ಎಲ್. ರಾಹುಲ್ 87 ಹಾಗೂ ನಾಯಕ ಶುಭಮಾನ್ ಗಿಲ್ 78 ರನ್ ಗಳಿಸಿ ಕ್ರೀಸ್ ಬಳಿ ಇದ್ದರು.
ಇದಕ್ಕೆ ಮುನ್ನ ಭಾರತದ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಉತ್ತರವಾಗಿ ಆಡಿದ ಇಂಗ್ಲೆಂಡ್ ತನ್ನ ಮೊದಲ ಸರದಿಯಲ್ಲಿ 669 ರನ್ ಗಳಿಸಿತ್ತು. ಇದರಿಂದ ಭಾರತ ತಂಡ 311 ರನ್ ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ತನ್ನ ದ್ವಿತೀಯ ಸರದಿ ಆರಂಭಿಸಿತು. ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ವಿಕೆಟ್ ಗಳನ್ನು ಕಳೆದುಕೊಂಡ ಭಾರತ ರನ್ ಖಾತೆ ತೆರೆಯದೇ 2 ವಿಕೆಟ್ ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಇದಾದ ನಂತರ ನಾಯಕ ಶುಭಮಾನ್ ಗಿಲ್ ಹಾಗೂ ಕೆ.ಎಲ್. ರಾಹುಲ್ ಜವಾಬ್ದಾರಿ ಅರಿತು ಆಟವಾಡಿ ತಂಡವನ್ನು ಒಂದು ಹಂತಕ್ಕೆ ಸಂಕಷ್ಟದಿಂದ ಪಾರು ಮಾಡಿದ್ದಾರೆ.




