ಮೈಸೂರು: ನಗರದ ವಸ್ತುಪ್ರದರ್ಶನ ಮುಂಭಾಗದ ರಸ್ತೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವ್ಯಕ್ತಿಯೋರ್ವನನ್ನು ಕೊಲೆಗೈದಿರುವ ಘಟನೆ ಮಾಸುವ ಮುನ್ನವೇ, ಆ ಸ್ಥಳದ ಸಮೀಪದಲ್ಲೇ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ಇದರಿಂದ ಸಾಂಸ್ಕೃತಿಕ ನಗರಿ ಬೆಚ್ಚಿಬಿದ್ದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಆರೋಪಿ ಪತ್ತೆಗೆ ತಕ್ಷಣವೇ ತಂಡವನ್ನುರಚಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ಕೇವಲ ಎಂಟು ಗಂಟೆಗಳ ಅವಧಿಯಲ್ಲಿ ದುಷ್ಕರ್ಮಿಯ ಹೆಡೆಮುರಿ ಕಟ್ಟಿದ್ದಾರೆ.
ಕಲಬುರ್ಗಿ ಜಿಲ್ಲೆಯ ಸುಲ್ತಾನಪುರ ಮೂಲದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಕಾರ್ತಿಕ್‌ನನ್ನು ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೊಳ್ಳೇಗಾಲದಲ್ಲಿ ಬಂಧಿಸಿದ ಪೊಲೀಸರು ಮೈಸೂರಿಗೆ ಕರೆತರುವಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಅಲೆಮಾರಿ ಸಮುದಾಯದ ದಂಪತಿಯ 8 ವರ್ಷದ ಮಗಳ ಮೇಲೆ ವಸ್ತು ಪ್ರದರ್ಶನ ಆವರಣದ ಕುಸ್ತಿ ಅಖಾಡದ ಮುಂಭಾಗವಿರುವ ಖಾಲಿ ನಿವೇಶನದಲ್ಲಿ ಸಿದ್ದಲಿಂಗಪುರ ಮೂಲದ ಯುವಕ ಕಾರ್ತಿಕ್ ಅತ್ಯಾಚಾರ ನಡೆಸಿ ಹತ್ಯೆ ಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಸ್ತುತ ಆರೋಪಿಯನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ನಗರದ ಇಟ್ಟಿಗೆಗೂಡಿನ ಫುಟ್‌ಪಾತ್‌ನಲ್ಲಿ ತನ್ನ ಕುಟುಂಬದೊಂದಿಗೆ ಮಲಗಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಕಾರ್ತಿಕ್ ಆಕೆಯ ದೇಹದ ವಿವಿಧ ಭಾಗಗಳಿಗೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ.




