ಬೆಂಗಳೂರು: ರಾಜ್ಯದಲ್ಲಿ 2022ರಲ್ಲಿ ಹೆಚ್ಚಳ ಮಾಡಿದ ಶೇಕಡ 56ರ ಬದಲು ಶೇಕಡ 50ರಷ್ಟು ಮೀಸಲಾತಿ ಮಿತಿ ಮತ್ತು ರೋಸ್ಟರ್ ಬಿಂದು ಅನ್ವಯ 56432 ಹುದ್ದೆಗಳಿಗೆ 30 ದಿನದೊಳಗೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಮೀಸಲಾತಿ ಪ್ರಮಾಣ ಹೆಚ್ಚಳ, ಒಳ ಮೀಸಲಾತಿ ತಿಕ್ಕಾಟದ ಕಾರಣದಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳು ಹೋರಾಟ ತೀವ್ರಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ 56432 ಹುದ್ದೆಗಳಿಗೆ ಕೂಡಲೇ ನೇಮಕಾತಿ ಪ್ರಕ್ರಿಯೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಆರ್ಥಿಕ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಒಂದು ತಿಂಗಳೊಳಗೆ ಪ್ರಕ್ರಿಯೆ ನಡೆಸಬೇಕು.
2022ಕ್ಕೆ ಮೊದಲು ಜಾರಿಯಲ್ಲಿದ್ದ ಶೇಕಡ 50ರಷ್ಟು ಮೀಸಲಾತಿ ಮಿತಿ ಮತ್ತು ರೋಸ್ಟರ್ ಬಿಂದು ಅನ್ವಯ 56,432 ಹುದ್ದೆಗಳ ನೇಮಕಾತಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ(KPSC), ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದಲ್ಲಿ 4409 ಹುದ್ದೆ, 371 ಜೆ ಅಡಿ 32,132 ಹುದ್ದೆ, ಆರ್ಥಿಕ ಇಲಾಖೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ನೀಡಿರುವ 24,300 ಹುದ್ದೆ ಸೇರಿ 56,432 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಎಸ್ಸಿಗೆ ಶೇಕಡ 15 ರಷ್ಟು, ಎಸ್ಟಿಗೆ ಶೇಕಡ 3ರಂತೆ ಮೀಸಲಾತಿ ಇರುತ್ತದೆ.




