ಆಗ್ರಾ (ಉತ್ತರಪ್ರದೇಶ) : ಒಂದೇ ಮಹಿಳೆ 30 ತಿಂಗಳಲ್ಲಿ 25 ಹೆರಿಗೆ, 5 ಬಾರಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವೇ?. ಇದು ಕಂಡು ಕೇಳರಿಯದ ಮತ್ತು ಪವಾಡಕ್ಕೂ ಮಿಗಿಲಾದ ಅಂಶ. ಆದರೆ ಇದು ಜನನಿ ಸುರಕ್ಷಾ ಯೋಜನೆಯಡಿ (ಜೆಎಸ್ವೈ) ಸಾಕಾರವಾಗಿದೆ..!
ಗೊಂದಲ ಬೇಡ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನನಿ ಸುರಕ್ಷಾ ಯೋಜನೆಯಲ್ಲಿ ನಡೆದ ಭಾರೀ ಅವ್ಯವಹಾರದ ಝಲಕ್ ಇದು. ಉತ್ತರಪ್ರದೇಶದ ಆಗ್ರಾದಲ್ಲಿ ಇಂತಹದ್ದೊಂದು ಅವ್ಯವಹಾರ ಬಯಲಾಗಿದೆ. ಇಲ್ಲಿನ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಒಂದೇ ಮಹಿಳೆಯ ಹೆಸರಿನಲ್ಲಿ 25 ಬಾರಿ ಹೆರಿಗೆ ಮಾಡಿಸಿದ ದಾಖಲೆ ತೋರಿಸಿ ಗೋಲ್ಮಾಲ್ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧಿತ ಪ್ರಕರಣ ಬಯಲಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ.
ಜನನಿ ಸುರಕ್ಷಾ ಯೋಜನೆಯಲ್ಲಿ ನಡೆದ ವಂಚನೆಯ ಬಗ್ಗೆ ಪ್ರಕರಣ ದಾಖಲಾಗಿದೆ. ಇಲಾಖೆಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಡೇಟಾ ಎಂಟ್ರಿ ಆಪರೇಟರ್ ತಲೆಮರೆಸಿಕೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅವ್ಯವಹಾರದ ಕುರಿತು ತನಿಖೆ ನಡೆಸಲು ಆಗ್ರಾ ಸಿಎಂಒ ಡಾ.ಅರುಣ್ ಶ್ರೀವಾಸ್ತವ ಆಂತರಿಕ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ. ಹಗರಣದಲ್ಲಿ ಡೇಟಾ ಎಂಟ್ರಿ ಆಪರೇಟರ್, ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್, ಬ್ಲಾಕ್ ಅಕೌಂಟಿಂಗ್ ಮ್ಯಾನೇಜರ್ ಭಾಗಿಯಾಗಿದ್ದು ಪತ್ತೆಯಾಗಿದೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ ಧನಸಹಾಯವನ್ನು ಆರೋಪಿಗಳು ಸುಳ್ಳು ದಾಖಲೆ ಸೃಷ್ಟಿಸಿ ಇತರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಸರ್ಕಾರವು ಇತ್ತೀಚೆಗೆ 2021 ರಿಂಧ 2023 ರ ನಡುವೆ ಯೋಜನೆಯ ಲೆಕ್ಕಪರಿಶೋಧನೆ ನಡೆಸಿದಾಗ, ಫತೇಹಾಬಾದ್ನ ಒಂದೇ ಮಹಿಳೆಗೆ 25 ಬಾರಿ ಹೆರಿಗೆ ಮಾಡಿಸಿದ, ಆಕೆಗೇ 5 ಬಾರಿ ಸಂತಾಹರಣ ಚಿಕಿತ್ಸೆ ಮಾಡಿದ ಬಗ್ಗೆ ಉಲ್ಲೇಖವಾಗಿದೆ. ಇದಕ್ಕಾಗಿ ಮಹಿಳೆಯ ಖಾತೆಗೆ 45 ಸಾವಿರ ರೂಪಾಯಿ ವರ್ಗ ಮಾಡಿರುವುದು ಕೂಡಾ ಪತ್ತೆಯಾಗಿದೆ.
ಫಲಾನುಭವಿ ಮಹಿಳೆಯನ್ನು ವಿಚಾರಿಸಿದಾಗ, ತನಗೆ ಇಬ್ಬರು ಮಕ್ಕಳು. ಹಿರಿಯನಿಗೆ 11 ವರ್ಷ, ಕಿರಿಯ ಮಗನಿಗೆ 8 ವರ್ಷ. ಅದಾದ ಬಳಿಕ ತಾನು ಗರ್ಭಿಣಿಯಾಗಿಲ್ಲ. 8 ವರ್ಷಗಳ ಹಿಂದೆ ಸಂತಾಹರಣ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ವಂಚನೆಯ ಬಯಲಾದ ಬೆನ್ನಲ್ಲೇ, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗಾಗಿ ತಲಾಶ್ ನಡೆಯುತ್ತಿದೆ.