ನವದೆಹಲಿ: ಹಬ್ಬದ ಸೀಸನ್ ನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರುಗತಿಯಲ್ಲಿ ಮುಂದುವರೆದಿದೆ. ಇದೇ ರೀತಿ ದರ ಏರಿಕೆ ಮುಂದುವರೆಯದಲ್ಲಿ ಆಭರಣ ಚಿನ್ನ ದರ 10 ಗ್ರಾಂಗೆ 77,000 ರೂ. ದಾಟಲಿದ್ದು, ಬೆಳ್ಳಿ ದರ ಕೆಜಿಗೆ ಒಂದು ಲಕ್ಷ ರೂಪಾಯಿ ದಾಟಲಿದೆ ಎಂದು ಆಭರಣ ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಸಾಮಾನ್ಯವಾಗಿ ವಾರ್ಷಿಕ ಶೇಕಡ 10ರಷ್ಟು ಏರಿಕೆ ಕಾಣುತ್ತಿದ್ದ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಈ ಬಾರಿ ಅತ್ಯಧಿಕ ಶೇಕಡ 40ರಷ್ಟು ಏರಿಕೆಯಾಗಿದೆ.
ಯುದ್ಧ ಸೇರಿ ಅನೇಕ ಜಾಗತಿಕ ರಾಜಕೀಯ, ಭೌಗೋಳಿಕ ಪರಿಸ್ಥಿತಿಗಳು ದರ ಏರಿಕೆಗೆ ಕಾರಣವಾಗಿವೆ. ಅಮೆರಿಕದ ಫೆಡರಲ್ ರಿಸರ್ವ್ ಇತ್ತೀಚೆಗೆ ಬಡ್ಡಿ ದರ ಇಳಿಕೆ ಮಾಡಿರುವುದು ಮತ್ತು ಇನ್ನಷ್ಟು ಇಳಿಕೆ ನಿರೀಕ್ಷೆ ಇರುವುದರಿಂದ ಚಿನ್ನದ ದರ ಏರುಗತಿಯಲ್ಲಿ ಮುಂದುವರೆದಿದೆ.
ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್ ಚಿನ್ನದ ದರ 10 ಗ್ರಾಂ ಗೆ 72,220 ರೂಪಾಯಿ, 24 ಕ್ಯಾರಟ್ ಚಿನ್ನದ ದರ 10 ಗ್ರಾಂ ಗೆ 78,050 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಒಂದು ಕೆಜಿಗೆ 93,100 ರೂಪಾಯಿಗೆ ತಲುಪಿದೆ.
ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಕೆ ಮಾಡಿದ ನಂತರ ಖರೀದಿ ಭರಾಟೆ ಜೋರಾಗಿದೆ. ಈ ಬಾರಿ ಉತ್ತಮ ಮುಂಗಾರು ಕಾರಣ ಹಬ್ಬದ ಸೀಸನ್ ನಲ್ಲಿ ಆಭರಣ ಖರೀದಿ ಹೆಚ್ಚಾಗಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ಚಿನ್ನ ಬೆಳ್ಳಿ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.