ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿಯೂ ಶುಕ್ರವಾರ ಚಿನ್ನದ ದರ 1100 ರೂಪಾಯಿಯಷ್ಟು ಏರಿಕೆಯಾಗಿದೆ.
ಗುರುವಾರ ಶೇಕಡ 99.9 ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ 91,050 ರೂಪಾಯಿ ಇತ್ತು. ಶುಕ್ರವಾರ 92,150 ರೂಪಾಯಿ ಆಗಿದ್ದು, ಇದು ಹೊಸ ದಾಖಲೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದೆ.
2024- 25 ನೇ ಆರ್ಥಿಕ ವರ್ಷದಲ್ಲಿ ಚಿನ್ನದ ಬೆಲೆ 23,730 ರೂ.ನಷ್ಟು ಹೆಚ್ಚಳ ಆಗಿದೆ. ಕಳೆದ ವರ್ಷ ಏಪ್ರಿಲ್ 1ರಂದು 10 ಗ್ರಾಂ ಚಿನ್ನದ ದರ 68,420 ರೂ. ಇತ್ತು.
ಶೇಕಡ 99.5 ರಷ್ಟು ಶುದ್ಧತೆಯ ಚಿನ್ನದ ದರ ಶುಕ್ರವಾರ 91,700 ರೂ.ಗೆ ತಲುಪಿ ದಾಖಲೆ ಬರೆದಿದೆ. ಗುರುವಾರ 90,600 ರೂ.ಗೆ ಮಾರಾಟವಾಗಿತ್ತು.
ಇನ್ನು ಬೆಳ್ಳಿ ದರ ಪ್ರತಿ ಕೆಜಿಗೆ 1300 ರೂಪಾಯಿ ಏರಿಕೆಯಾಗಿದ್ದು, 1.03 ಲಕ್ಷ ರೂ.ಗೆ ತಲುಪಿದೆ. ಗುರುವಾರ ಒಂದು ಕೆಜಿ ಬೆಳ್ಳಿ ದರ 1,01,700 ರೂಪಾಯಿ ಇತ್ತು. ಮಾ. 19ರಂದು ಬೆಳ್ಳಿಯ ದರ ಒಂದು ಕೆಜಿಗೆ 1,03,500 ರೂಪಾಯಿಗೆ ತಲುಪಿ ಹೊಸ ದಾಖಲೆ ಬರೆದಿತ್ತು.