ಬೆಂಗಳೂರು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ನೋಂದಣಿ, ಫಲಾನುಭವಿಗಳ ಆಯ್ಕೆ, ನೈಜತೆ ಪರಿಶೀಲನೆ ಮತ್ತಿತರ ಕೆಲಸಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ʼಅಂಬೇಡ್ಕರ್ ಸೇವಾ ಕೇಂದ್ರʼವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
“ರಾಜ್ಯದಲ್ಲಿ 58 ಲಕ್ಷ ಮಂದಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರು ಎಂಬುದಾಗಿ ನೋಂದಣಿ ಮಾಡಿಕೊಂಡಿದ್ದರು.
ನೈಜತೆ ಪರಿಶೀಲನೆ ಬಳಿಕ 20 ಲಕ್ಷ ಮಂದಿಯ ನೋಂದಣಿ ರದ್ದುಗೊಳಿಸಲಾಗಿದೆ. ಉಳಿದಿರುವ 38 ಲಕ್ಷ ಮಂದಿಯ ನೈಜತೆ ಪರಿಶೀಲನೆಯನ್ನೂ ಅಂಬೇಡ್ಕರ್ ಸೇವಾ ಕೇಂದ್ರಗಳಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.