ವಿಜಯನಗರ : ವಿಚಿತ್ರ ಬೇಡಿಕೆ ಮುಂದಿಟ್ಟು ದೇವರ ಹುಂಡಿಗೆ ಚೀಟಿ ಬರೆದು ಪ್ರಾರ್ಥಿಸುವುದು, ರಥೋತ್ಸವಕ್ಕೆ ಎಸೆಯುವ ಬಾಳೆಹಣ್ಣಿನ ಮೇಲೆ ಮುಂದಿನ ಸಿಎಂ ಇವರೇ, ಅವರೇ ಆಗಲಿ, ಕೊರೋನಾ ಹೋಗಲಿ ಎಂಬಿತ್ಯಾದಿ ಬರಹ ಬರೆದು ರಥಕ್ಕೆ ಹಣ್ಣನ್ನು ಎಸೆಯುವ ಮೂಲಕ ವಿಭಿನ್ನವಾಗಿ ದೇವರಲ್ಲಿ ಪ್ರಾರ್ಥನೆ ಮಾಡುವ ಭಕ್ತರು ಎಲ್ಲೆಡೆ ಸಹಜವಾಗಿ ಸಿಗುತ್ತಾರೆ.
ಜಿಲ್ಲೆಯ ಕೊಟ್ಟೂರು ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಜರುಗಿದೆ. ಜಾತ್ರೆ ನಿಮಿತ್ತ ನಿನ್ನೆ ರಥೋತ್ಸವದಲ್ಲಿ ಭಕ್ತರು ಲಕ್ಷೋಪಾದಿಯಲ್ಲಿ ಹಾಜರಾಗಿ ಸ್ವಾಮಿಯ ದರ್ಶನ ಪಡೆದರು. ಆದರೆ ಓರ್ವ ಯುವಕ ಬಾಳೆ ಹಣ್ಣಿನ ಮೇಲೆ ವಿಶೇಷ ಬರಹ ಬರೆದು ಪ್ರಾರ್ಥನೆ ಮಾಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.
“ಹೆಣ್ಣು ಹೆತ್ತವರಿಗೆ ಸರ್ಕಾರಿ ನೌಕರಿ ಗುಂಗು ಅಳಿಯಲಿ, ರೈತರ ಮಕ್ಕಳಿಗೆ ಹೆಣ್ಣು ಸಿಗಲಿ” ಎಂದು ಬರೆದು ರಥಕ್ಕೆ ಬಾಣೆಹಣ್ಣನ್ನು ಎಸೆಯಲಾಗಿದೆ.
ಸರ್ಕಾರಿ ನೌಕರಿ ಇರುವವರಿಗೆ ಮಾತ್ರ ಹೆಣ್ಣು ನೀಡುವ ಪೋಷಕರ ಮನಸ್ಥಿತಿಯನ್ನು ವಿರೋಧಿಸುವ ಬರಹವಿದ್ದು, ಅಂತಹ ಬುದ್ಧಿ ಅಳಿಸಿ, ರೈತರ ಮಕ್ಕಳಿಗೆ ಹೆಣ್ಣು ಸಿಗುವಂತೆ ಒಳ್ಳೆಯ ಬುದ್ದಿಯನ್ನು ದೇವರು ಕರುಣಿಸಲಿ ಎಂಬರ್ಥದಲ್ಲಿ ಬರೆದು ಪ್ರಾರ್ಥಿಸಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.




