ತುರುವೇಕೆರೆ: ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಪ್ರಾಥಮಿಕ ಕೃಷಿ ಸಹಕಾರ ಸಂಘವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ವೈ.ಟಿ.ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಘಗಳು ರೈತರಿಗೆ ಮತ್ತು ನಾಗರೀಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವುದಲ್ಲದೆ ಆರ್ಥಿಕ ಸದೃಢತೆಗೂ ಕಾರಣವಾಗಿದೆ. ಸಹಕಾರ ಸಂಘದಿಂದ ಸಾಲ ಪಡೆದ ರೈತರು ತಮ್ಮಲ್ಲಿರುವ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡುತ್ತಿದ್ದಾರೆ. ಸಾಲ ಪಡೆಯಲು ಸಹಕಾರ ಸಂಘ ಬೇಕು, ಠೇವಣಿ ಇಡಲು ರಾಷ್ಟ್ರೀಕೃತ ಬ್ಯಾಂಕ್ ಬೇಕೇ? ಎಂಬ ಬಗ್ಗೆ ರೈತರು ಚಿಂತಿಸಬೇಕಿದೆ ಎಂದರು.
ಗ್ರಾಮ ಪಂಚಾಯ್ತಿಯ ರೀತಿ ಸಹಕಾರ ಸಂಘಕ್ಕೂ ಮೀಸಲಾತಿ ತರಲು ಸರ್ಕಾರ ನಿರ್ಧರಿಸಿದೆ. ಈ ರೀತಿ ಮೀಸಲಾತಿ ತಂದರೆ ಸಮಾನತೆ ಸಾರಿದಂತಾಗುತ್ತದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಎಲ್ಲಾ ವರ್ಗಕ್ಕೂ ಅಧಿಕಾರ ದೊರೆತು ಸೇವೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದ ಅವರು, ತುರುವೇಕೆರೆ ತಾಲ್ಲೂಕಿಗೆ ಜಿಲ್ಲಾ ಡಿಸಿಸಿ ಬ್ಯಾಂಕ್ ಇಂದ 80 ಕೋಟಿರೂಗಳಷ್ಟು ಸಾಲವನ್ನು ನೀಡಲಾಗಿದೆ. ಸರ್ಕಾರದ ಸಾಲ ಮನ್ನಾ, ಬಡ್ಡಿ ಮನ್ನಾ ಯೋಜನೆಯಲ್ಲಿ ತಾಲೂಕಿನ ಸಾವಿರಾರು ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ. ಸಹಕಾರ ಸಂಘಗಳು ಜಾತ್ಯಾತೀತ, ಪಕ್ಷಾತೀತವಾಗಿರಬೇಕು. ರೈತರು, ಸಾರ್ವಜನಿಕರ ಸೇವೆಯೇ ಪ್ರಮುಖ ಉದ್ದೇಶವಾಗಬೇಕು. ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳು ಒಬ್ಬೊಬ್ಬರು ಒಂದೊಂದು ರಾಜಕೀಯ ಪಕ್ಷದಲ್ಲಿದ್ದಾರೆ, ಆದರೆ ಸಹಕಾರ ಸಂಘದ ಅಭಿವೃದ್ದಿಯಲ್ಲಿ, ರೈತರ ಸೇವೆಯಲ್ಲಿ ನಾವೆಲ್ಲಾ ಒಂದೇ ಆಗಿರುವ ಕಾರಣ ಸಂಘ ಪ್ರಗತಿಯತ್ತ ಸಾಗಿದೆ. ರೈತರು ತಾವು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಸಮಯ ಬಂದಾಗ ಮಾತ್ರ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ವಿಧಾನಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ತುಮುಲ್ ನಿರ್ದೇಶಕ ಮಹಲಿಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಪಪಂ ಅಧ್ಯಕ್ಷೆ ಸ್ವಪ್ನ, ಉಪಾಧ್ಯಕ್ಷೆ ಭಾಗ್ಯ, ಕೊಡಗೀಹಳ್ಳಿ ಗ್ರಾಪಂ ಅಧ್ಯಕ್ಷ ಕಿರಣ್, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ರಮೇಶ್ ಗೌಡ ಸೇರಿದಂತೆ ಜಿಲ್ಲಾ ಡಿಸಿಸಿ ಬ್ಯಾಂಕ್ ಹಾಗೂ ಕೊಡಗೀಹಳ್ಳಿ ಸಹಕಾರ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು, ರೈತರು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್