ದಾವಣಗೆರೆ : ಪಂಚಮಸಾಲಿ ಹೋರಾಟದ ವೇಳೆ ನಡೆದ ಗೋಲಿಬಾರ್ ವಿಚಾರ ಎಲ್ಲೆಡೆ ದೊಡ್ಡ ಸದ್ದು ಮಾಡುತ್ತಿದೆ. ಸರ್ಕಾರದ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಈ ಬೆನ್ನಲ್ಲೇ ಮಾಜಿ ಶಾಸಕ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ 2ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಕೂಡಲ ಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಲು, ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಲು ಸಂಚು ಮಾಡಿದ್ದರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ.
ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳು ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಪ್ರತಿಭಟನೆ ನೇತೃತ್ವ ವಹಿಸಿರುವ ಅವರನ್ನೇ ಮುಗಿಸಿದರೆ, ರಾಜ್ಯದಲ್ಲಿ ಇಡೀ ಹೋರಾಟವೇ ನಿಲ್ಲುತ್ತದೆಂದು ಗೋಲಿಬಾರ್ ಮಾಡಲು ಕೆಲವರು ಪ್ಲಾನ್ ಮಾಡಿಕೊಂಡಿದ್ದರು ಎಂದರು.
ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ, ದೀಕ್ಷಾ ಗೌಡಗೂ ಮೀಸಲಾತಿ, ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ನಿರಂತರ ಹೋರಾಡುತ್ತಾ ಬಂದಿದ್ದಾರೆ. ಸ್ವಾಮೀಜಿ ಮೇಲಿನ ಹಲ್ಲೆ, ದೌರ್ಜನ್ಯ, ಬಂಧನವನ್ನು ಸಮಸ್ತ ಮಠಾಧೀಶರು, ಸ್ವಾಮೀಜಿಗಳು ಖಂಡಿಸಬೇಕು ಎಂದರು.
ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು. ಗೃಹ ಸಚಿವ ಡಾ.ಪರಮೇಶ್ವರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.