ಬೆಂಗಳೂರು: ಪಂಚಾಯತ್ ರಾಜ್ ವಿವಿ ಕುಲಪತಿ ನೇಮಕ ವಿಚಾರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಗರಂ ಆಗಿದ್ದಾರೆ.
ಇತ್ತೀಚಿಗೆ ಅಧಿವೇಶನದಲ್ಲಿ ಮಂಡನೆ ಮಾಡಲಾಗಿದ್ದ ಪಂಚಾಯತ್ ರಾಜ್ ವಿವಿ ಕುಲಪತಿ ನೇಮಕ ತಿದ್ದುಪಡಿ ಕುರಿತು ರಾಜ್ಯಪಾಲರು ಕಿಡಿಕಾರಿದ್ದು, ವಿಧೇಯಕಕ್ಕೆ ಅನುಮೋದನೆ ನೀಡದೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿದ್ದಾರೆ.
ವಿಧೇಯಕ ಅನುಮೋದನೆ ಆಗದಿದ್ದಕ್ಕೆ ಹಳೆ ನಿಯಮ ಜಾರಿಯಲ್ಲಿದ್ದು, ಹಳೆ ನಿಯಮದ ಪ್ರಕಾರವೇ ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ನೇಮಕ ಮಾಡಲಾಗುತ್ತದೆ. ತಕ್ಷಣ ನೇಮಕ ಮಾಡಿ. ಅಲ್ಲದೆ ಒಂದು ತಿಂಗಳೊಳಗೆ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಇಲ್ಲದಿದ್ದರೆ ನಾನೇ ಕ್ರಮ ತೆಗೆದುಕೊಂಡು ಅರ್ಜಿ ಆಹ್ವಾನಿಸುತ್ತೇನೆ ಎಂದು ಕೂಡ ಪತ್ರದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.
ಕಳೆದ 10 ತಿಂಗಳಿಂದ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ ಹುದ್ದೆ ಖಾಲಿ ಇದೆ. ಕುಲಪತಿ ನೇಮಕದ ಬಗ್ಗೆ ಸಚಿವ ಪ್ರಿಯಾಂಕಾ ಖರ್ಗೆ ಹಾಗು ರಾಜ್ಯ ಸರ್ಕಾರಕ್ಕೆ ಕಾಳಜಿ ಕಾಣುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.