ಬೆಳಗಾವಿ : ಬೆಳಗಾವಿಯಲ್ಲಿ (Belagavi ) ಆಸ್ತಿ ವಿಚಾರಕ್ಕೆ ಎಳೆ ಕಂದಮ್ಮನ ಪಾಲಿಗೆ ಸ್ವಂತ ದೊಡ್ಡಪ್ಪನೇ ವಿಲನ್ ಆಗಿದ್ದ ಕೇಸ್ ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಸಿಕ್ಕಿದೆ.
ಆಸ್ತಿ ವಿಚಾರಕ್ಕೆ ಆರು ವರ್ಷದ ಮಗುವನ್ನು ಕ್ರೂರವಾಗಿ ಹತ್ಯೆ ಮಾಡಿದ ದೊಡ್ಡಪ್ಪನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಮಂಜುನಾಥ ನಾಯಕ್ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 75 ರೂ. ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 25 ಸಾವಿರವನ್ನು ಮಗುವಿನ ತಂದೆಗೆ ನೀಡುವಂತೆ ಸೂಚಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ 2021ರ ಜನವರಿಯಲ್ಲಿ ನಡೆದಿದ್ದ ಈ ಬರ್ಬರ ಕೊಲೆ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು.
ಆರೋಪಿ ಈರಪ್ಪ ಸಂಕನ್ನವರ, ತನ್ನ ತಮ್ಮ ವಿರೇಶ್ ಜೊತೆಗಿನ ಆಸ್ತಿ ಗಲಾಟೆಯಿಂದ ಸಿಟ್ಟುಗೊಂಡು ಆಟವಾಡುತ್ತಿದ್ದ ಆರು ವರ್ಷದ ಸಿದ್ಧಾರ್ಥ್ ವಿರೇಶ್ ಸಂಕನ್ನವರನನ್ನು ಕುಡಗೋಲಿನಿಂದ 5 ರಿಂದ 6 ಬಾರಿ ಕೊಚ್ಚಿ ಹತ್ಯೆ ಮಾಡಿದ್ದನು.
ಹತ್ಯೆಯ ನಂತರ, ಮಗು ಸಿದ್ಧಾರ್ಥನ ಸಹೋದರಿ ಅಂಕಿತಾಳ ಮೇಲೂ ಪ್ರಾಣಾಪಾಯ ಯತ್ನ ನಡೆದಿತ್ತು.ಪ್ರಕರಣದಲ್ಲಿ ಒಟ್ಟು 35 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಾಗಿದ್ದು, ಅದರಲ್ಲೂ ಮೂವರು ಮಕ್ಕಳ ಪ್ರತ್ಯೇಕ ಸಾಕ್ಷಿ ಪ್ರಮುಖ ಪಾತ್ರವಹಿಸಿದೆ.ಇದೀಗ ಮೃಗೀಯ ವರ್ತನೆಗೆ ಈರಪ್ಪನಿಗೆ ತಕ್ಕ ಶಾಸ್ತಿಯಾಗಿದೆ.




