ಸಿರುಗುಪ್ಪ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಡ ಶಾಲೆಯಲ್ಲಿ ನಡೆದ 2000-2001ನೇ ಸಾಲಿನಲ್ಲಿ ಹತ್ತನೇ ತರಗತಿ ಓದುತ್ತಿದ್ದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅಂದಿನ ಶಿಕ್ಷಕರಾದ ಬಿ.ಪಿ.ಕಲ್ಲಪ್ಪ,ಅವರು ಉದ್ಘಾಟಿಸಿದರು.
ನಿವೃತ್ತ ಶಿಕ್ಷಕರಾದ ಎಸ್.ನಾಗೇಂದ್ರಪ್ಪ ಅವರು ಮಾತನಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಒಳೆಯ ಸಂಸ್ಕೃತಿ ಹಾಗೂ ಸಂಸ್ಕಾರಗಳು ಬಹು ಮುಖ್ಯವಾಗಿರುತ್ತವೆ. ಗುರು ಹಿರಿಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಹೇಗೆ ಗೌರವ ಕೊಡಬೇಕೆಂಬ ಸಂಸ್ಕೃತಿಯನ್ನು ಹಾಗೂ ವಿದ್ಯೆಯನ್ನು ನಮ್ಮೆಲ್ಲಾ ಶಿಕ್ಷಕ ವೃಂದದಿಂದ ಕಲಿಸಿಕೊಡಲಾಯಿತು.
ಆದ್ದರಿಂದಲೇ ನೀವೆಲ್ಲಾ ಇಂದು ಅತ್ಯುನ್ನತ ಸ್ಥಾನಗಳನ್ನು ಪಡೆದಿದ್ದೀರಿ.
ಉತ್ತಮ ಸಂಸ್ಕಾರವಂತರಾಗಿದ್ದೀರಿ, ನಿಮ್ಮಂತೆಯೇ ನಿಮ್ಮ ಮಕ್ಕಳಿಗೂ ಗುರುಹಿರಿಯರಿಗೆ ನೀಡಬೇಕಾದ ಗೌರವವನ್ನು, ಸಂಸ್ಕಾರಗಳನ್ನು ನೀಡಿ ಸಮಾಜದ ಹಿತವನ್ನು ಕಾಪಾಡಬೇಕೆಂದರು. ಇನ್ನೋರ್ವ ನಿವೃತ್ತ ಶಿಕ್ಷಕರಾದ ಈರಣ್ಣ ಅವರು ಮಾತನಾಡಿ ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮಹತ್ವದ್ದಾಗಿದೆ. 25 ವರ್ಷಗಳ ನಂತರವೂ ಅದೇ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ನೀವೆಲ್ಲಾ ಸೇರಿ ನಮ್ಮನ್ನ ಸನ್ಮಾನಿಸಿದ್ದೀರಿ.
ಮಕ್ಕಳ ವಯಸ್ಸಿನಲ್ಲಿ ಕುಚೇಷ್ಟೆಗಳು ಸಾಮಾನ್ಯ. ಅಂದು ನಮಗೆಲ್ಲಾ ನಿಮ್ಮ ಮೇಲಿನ ಕಾಳಜಿಯಿತ್ತು. ನಿಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಒಬ್ಬ ಆದರ್ಶ ಶಿಕ್ಷಕನಾಗಿರುತ್ತದೆ. ನಿಮ್ಮ ಉನ್ನತ ಬೆಳವಣಿಗೆಗಳನ್ನು ನೋಡಿದಾಗ ನಾವು ಕಲಿಸಿದ ಶಿಕ್ಷಣ ಸಾರ್ಥಕವಾಗಿದೆಂದು ಹೆಮ್ಮೆ ಪಡುವಂತಾಗಿದೆ ಎಂದರು.
ಹಿಂದಿ ಭಾಷೆಯ ಶಿಕ್ಷಕರಾಗಿ ಅಬ್ದುಲ್ ಗನ್ನಿಸಾಬ್ ಅವರು ಮಾತನಾಡಿ ಎಲ್ಲಾದರೂ ಎಂತಾದರೂ ಇರು ಎಂದೆಂದಿಗೂ ಸ್ನೇಹವನ್ನು ಮರೆಯದಿರು ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ, ಹುದ್ದೆಗಳಲ್ಲಿ, ದೂರದ ಪಟ್ಟಣಗಳಲ್ಲಿರುವ ನೀವೆಲ್ಲಾ ಒಟ್ಟುಗೂಡಿ ನಮ್ಮನ್ನು ಗೌರವಿಸುವ ಮೂಲಕ ನಿಮ್ಮ ಗುರುಭಕ್ತಿ ಹಾಗೂ ಸ್ನೇಹವನ್ನು ಎತ್ತಿಹಿಡಿರುವುದು ಸಂತಸ ತಂದಿದೆ. ನಿಮ್ಮ ಮುಂದಿನ ಭವಿಷ್ಯವೂ ಇನ್ನು ಉಜ್ವಲವಾಗಲೆಂದು ಹಾರೈಸಿದರು.
ಕಾರ್ಯಕ್ರಮದ ನಿಮಿತ್ತ ತಮ್ಮ ಗುರುಗಳನ್ನು ವಿವಿಧ ವಾದ್ಯಗಳೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಪ್ರೌಡಶಾಲೆಗೆ ಕರೆತರಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ವೃತ್ತಿ ಹಾಗೂ ವಿಳಾಸವನ್ನು ಹಾಗೂ ಅಂದಿನ ತಮ್ಮ ಅನುಭವನ್ನು ಹಂಚಿಕೊಂಡರು.ಗುರುಗಳ ಶ್ರಮ ಮತ್ತು ಕಾರ್ಯವನ್ನು ಶ್ಲಾಘಿಸಿದರು. ಶಿಕ್ಷಕರನ್ನು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಪ್ರೌಡಶಾಲೆಯ ಉಪಪ್ರಾಚಾರ್ಯರಾದ ವೆಂಕಟೇಶ್‌ಶೆಟ್ಟಿ, ನಿವೃತ್ತ ಶಿಕ್ಷಕರಾದ ಷಣ್ಮುಖಾಚಾರ್ಯ, ಎಮ್.ಡಿ.ವಸುಮತಿ, ವೀರಯ್ಯ, ಲಿಂಗಣ್ಣ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




