ತುರುವೇಕೆರೆ: ತಾಲ್ಲೂಕಿನ ಸಂಪಿಗೆ ಗ್ರಾಮದ ಶ್ರೀ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಜನವರಿ 10 ರಂದು ವೈಕುಂಠ ಏಕಾದಶೀ ಮಹೋತ್ಸವ ಹಮ್ಮಿಕೊಂಡಿದ್ದು, ವಿಶೇಷವಾಗಿ ಅಮ್ಮನವರಿಗೆ, ಸ್ವಾಮಿಯವರಿಗೆ ವಜ್ರಾಂಗಿ ಅಲಂಕಾರ ನಡೆಸಲಾಗುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹೋತ್ಸವವನ್ನು ಯಶಸ್ಸಿಗೆ ಅಗತ್ಯ ಸಹಕಾರ ನೀಡಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹರೀಶ್ ಮನವಿ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಮಹೋತ್ಸವವನ್ನು ನಡೆಸಲಾಗುತ್ತಿದೆ. ಮೊದಲಬಾರಿಗೆ ವಿಶೇಷವಾಗಿ ಅಮ್ಮನವರಿಗೆ, ಸ್ವಾಮಿಯವರಿಗೆ ಬೆಳ್ಳಿ ಕವಚದೊಂದಿಗೆ ವಜ್ರಾಂಗಿ ಅಲಂಕಾರವನ್ನು ಮಾಡಲಾಗುತ್ತಿದೆ. ಜನವರಿ 10 ರಂದು ಬೆಳಿಗ್ಗೆ ಸ್ವಾಮಿಯವರಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ಗೋಪೂಜೆ, ಗೋಗ್ರಾಸ, ವೈಕುಂಠ ದ್ವಾರ ಪ್ರವೇಶ, ಉಯ್ಯಾಲೆ ಸೇವೆ, ಮಹಾಮಂಗಳಾರತಿ ಕಾರ್ಯಕ್ರಮವಿದೆ. ಮಧ್ಯಾಹ್ನ 2 ಗಂಟೆಯ ನಂತರ ಸಪ್ತದ್ವಾರದ ಮೂಲಕ ಭಕ್ತಾಧಿಗಳಿಗೆ ಸ್ವಾಮಿಯವರ, ಅಮ್ಮನವರ ವೈಕುಂಠ ನಾರಾಯಣ ಅಲಂಕಾರದಲ್ಲಿ ದಿವ್ಯದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಸಂಜೆ 5 ಗಂಟೆಗೆ ಕಡಬದ ಶ್ರೀ ರಂಗನಾಥ ಸ್ವಾಮಿ ಕಲಾ ಬಳಗದಿಂದ ಪೌರಾಣಿಕ ನಾಟಕ ಸಂಪೂರ್ಣ ರಾಮಾಯಣ ಏರ್ಪಡಿಸಲಾಗಿದೆ. ಗುಬ್ಬಿ ತಾಲ್ಲೂಕಿನ ಸುಂಕಾಪುರ ಗ್ರಾಮದ ಶ್ರೀ ಕೆಂಪಮ್ಮದೇವಿ, ಶ್ರೀ ಕೆಂಚರಾಯ ಸ್ವಾಮಿಯ ಉತ್ಸವ, ಸಾಮೂಹಿಕ ಶಂಖ ಉದ್ಘೋಷ ಪ್ರತಿ ವರ್ಷದಂತೆ ನಡೆಯಲಿದೆ. ವಿಶೇಷವಾಗಿ ಈ ಬಾರಿ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳನ್ನು ಕಲಿಸಿ, ನಿರ್ದೇಶನ ಮಾಡುವ ಹಾರ್ಮೋನಿಯಂ ಕಲಾವಿದರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುವುದು ಎಂದರು.
ಈ ವರ್ಷ ಸುಮಾರು 40 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಏಕಾದಶಿ ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಹೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾಧಿಗಳಿಗೂ ಲಡ್ಡು ಪ್ರಸಾದ, ಬಾದಾಮಿ ಹಾಲು ಹಾಗೂ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಗುಬ್ಬಿ, ತುರುವೇಕೆರೆಯಿಂದ ರಾತ್ರಿ 11 ಗಂಟೆಯವರೆಗೆ ವಿಶೇಷ ಬಸ್ ವ್ಯವಸ್ಥೆ ಇದ್ದು ಭಕ್ತಾಧಿಗಳು ಏಕಾದಶಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಏಕಾದಶಿ ಮಹೋತ್ಸವದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಬೇಟೇರಾಯಸ್ವಾಮಿ ದೇವಸ್ಥಾನದ ಮಾಜಿ ಕನ್ವೀನರ್ ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯೋಗೀಶ್, ಕೃಷ್ಣಮೂರ್ತಿ, ನಂಜುಂಡಯ್ಯ, ನಿವೃತ್ತ ಶಿಕ್ಷಕ ವಿಜಯಕುಮಾರ್, ಸಂಪಿಗೆಯ ಕುಮಾರ್, ಜಯಣ್ಣ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್