ಬೆಂಗಳೂರು: ಯುವಕನೊಬ್ಬ ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿ ಮಗುವನ್ನು ಕೈಗೆ ಕೊಟ್ಟು ೩೬ ಲಕ್ಷ ಹಣ ದೋಚಿದ್ದೂ ಅಲ್ಲದೇ ಮತ್ತೋರ್ವಳೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ನಡೆದಿದೆ.
ಮೋಹನ್ ರಾಜ್ ಎಂಬಾತ ಮಹಿಳೆಗೆ ಮೋಸ ಮಾಡಿ ಎಸ್ಕೇಪ್ ಆಗಿರುವ ಆರೋಪಿ.ಕಳೆದ ಹತ್ತು ವರ್ಷಗಳಿಂದ ಮೋಹನ್ ರಾಜ್ ಮಹಿಳೆಗೆ ಪರಿಚಯವಿದ್ದ. 2021ರಲ್ಲಿ ಮಹಿಳೆ ವಿಚ್ಛೇಧನ ಪಡೆದುಕೊಂಡಿದ್ದರು.
ಒಂದೇ ಏರಿಯಾವಾಗಿದ್ದರಿಂದ ಮೋಹನ್ ರಾಜ್ ಪರಿಚಯವಾಗಿತ್ತು. 2022ರಲ್ಲಿ ಮೋಹನ್ ರಾಜ್ ನನ್ನು ಮಹಿಳೆ ವಿವಾಹವಾಗಿದ್ದಳು. 2023ರ ಫೆಬ್ರವರಿಯಲ್ಲಿ ದಂಪತಿಗೆ ಹೆಣ್ಣುಮಗುವಾಗಿದೆ.
ಮನೆ ಕಟ್ಟಿಸೋಣ ಹಾಗೇ ಹೀಗೆ ಎಂದು ಕಥೆ ಹೇಳಿ ಮೋಹನ್ ರಾಜ್ ಪತ್ನಿಯ ಬಳಿ ಇದ್ದ ಒಡವೆ ಅಡವಿಟ್ಟು ಸುಮಾರು ೩೬ ಲಕ್ಷದಷ್ಟು ಹಣ ಪಡೆದಿದ್ದ. ಹೀಗಿದ್ದ ವೇಳೆ ಮೋಹನ್ ರಾಜ್ ಸದಾಕಾಲ ಫೋನ್, ಚಾಟಿಂಗ್ ನಲ್ಲಿ ಬ್ಯುಸಿ ಇರುತ್ತಿದ್ದ.
ಯುವತಿಯರೊಂದಿಗೆ ಫೋನ್, ಮೆಸೇಜ್ ಗಳಲ್ಲಿ ನಿರತನಾಗಿರುತ್ತಿದ್ದ. ಪತ್ನಿ ಈ ಬಗ್ಗೆ ಪ್ರಶ್ನಿಸಿದರೆ ಜಗಳವಾಡಿ ಗಲಾಟೆ ಮಾಡುತ್ತಿದ್ದ. ಯುವತಿಯೊಂದಿಗೆ ಅಶ್ಲೀಲ ಸಂಭಾಷಣೆ, ಮೆಸೇಜ್ ಗಳಲ್ಲಿರುವುದು ಪತ್ನಿಗೆ ಗೋತ್ತಾಗುತ್ತಿದ್ದಂತೆ ಫೋನ್ ಕಸಿದು ಪ್ರಶ್ನೆ ಮಾಡಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಪದೇ ಪದೇ ಜಗಳ ಬೇಡವೆಂದು ಪತ್ನಿ ಸುಮ್ಮನಾಗಿದ್ದಳು. 2025ರಲ್ಲಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋದವನು ಮತ್ತೆ ಮನೆಗೆ ಬಂದಿಲ್ಲ.
ಫೋನ್ ಮಾಡಿ ಕೇಳಿದರೆ ನೀನ್ಯಾರೆಂದೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನಂತೆ. ಆತ ಇರುವ ಮನೆ ಬಳಿ ಹೋದರೆ ಹಲ್ಲೆ ನಡೆಸಿ ವಾಪಸ್ ಕಳುಹಿಸಿದ್ದಾನಂತೆ. ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಆತನ ವಿರುದ್ಧ ಕ್ರಮವಾಗಿಲ್ಲ. ಮತ್ತೆ ದೂರು ನೀಡಲು ಬಂದರೆ ನಿನ್ನನ್ನೇ ಒಳಗೆ ಹಾಕ್ತೀವಿ ಎಂದು ಪೊಲೀಸರು ಹೆದರಿಸಿದ್ದಾರೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ಆರೋಪಿಗೆ ಪೊಲೀಸರ ನಂಟಿದೆ ಎಂದು ಸಂತ್ರಸ್ತ ಮಹಿಳೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಬನಶಂಕರಿ ಠಾಣೆ ಪೊಲೀಸರು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.




