ರಾಯಚೂರು: ಲಿಂಗಸುಗೂರು ತಾಲೂಕಿನ ಆನೆ ಹೊಸೂರು ಬಳಿ ಕೈಕಾಲು ತೊಳೆದುಕೊಳ್ಳಲು ಹೋಗಿ ಮಹಿಳೆಯರಿಬ್ಬರು ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಹಿಳೆಯರನ್ನು ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35) ಮತ್ತು ದೇವಮ್ಮ (30) ಎಂದೂ ಗುರುತಿಸಲಾಗಿದೆ.
ಗದ್ದೆಯಲ್ಲಿ ಭತ್ತ ಹಚ್ಚುವ ಕೂಲಿ ಕೆಲಸ ಮುಗಿಸಿಕೊಂಡು ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದರು.
ಕೈಕಾಲು ತೊಳೆದು ಮನೆಗೆ ಹೋಗಲೆಂದು ನೀರಿಗೆ ಇಳಿಯುತ್ತಿದ್ದಂತೆ ಕಾಲು ಜಾರಿದೆ ಪರಿಣಾಮ ಇಬ್ಬರೂ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಪೊಲೀಸರು ಶೋಧ ಕಾರ್ಯ ನಡೆಸಿ ಮಹಿಳೆಯರ ಶವ ಹೊರತೆಗೆದಿದ್ದಾರೆ.
ಸದ್ಯ ಇಬ್ಬರು ಮಹಿಳೆಯರ ಮೃತದೇಹಗಳನ್ನು ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.




