ಬೆಂಗಳೂರು: ರಾಜ್ಯದಲ್ಲಿ ಪ್ರತಿ ಸಾವಿಗೂ ನಿಖರವಾದ ಕಾರಣ ತಿಳಿಯುವ ಉದ್ದೇಶದಿಂದ ಆರೋಗ್ಯ ಇಲಾಖೆ ಮರಣ ಕಾರಣದ ವೈದ್ಯಕೀಯ ಪ್ರಮಾಣ ಅನುಷ್ಠಾನಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ನೋಂದಾಯಿತವಾಗುವ ಸಾವುಗಳಲ್ಲಿ ಶೇಕಡ 26.7 ರಷ್ಟು ಸಾವುಗಳಿಗೆ ಮಾತ್ರ ವೈದ್ಯಕೀಯವಾಗಿ ಪ್ರಮಾಣ ಪತ್ರ ಲಭ್ಯವಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ಸಾವಿನ ನಿಖರ ಕಾರಣ ತಿಳಿಯುವ ಉದ್ದೇಶದಿಂದ ವೈದ್ಯಕೀಯ ಸಂಸ್ಥೆಗಳಲ್ಲಿನ ಸಾವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ವ್ಯಕ್ತಿ ಮರಣ ಹೊಂದಿದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಮರಣ ಹೊಂದಿದ ವ್ಯಕ್ತಿಯನ್ನು ವೈದ್ಯರು ಪರೀಕ್ಷಿಸಿ ನಮೂನೆ 4ಎ ನಲ್ಲಿ ಮರಣಕ್ಕೆ ಕಾರಣವೇನು ಎನ್ನುವ ಬಗ್ಗೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟವರಿಗೆ ಉಚಿತವಾಗಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾವು ಸಂಭವಿಸಿದ 21 ದಿನದಲ್ಲಿ ಸಂಬಂಧಪಟ್ಟವರು ಮರಣ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ವೈದ್ಯಕೀಯ ಪ್ರಮಾಣ ನಮೂನೆಗಳನ್ನು ನೀಡಲು ನಿರ್ಲಕ್ಷಿಸುವ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.




