Ad imageAd image

ತಾಲೂಕು ಆಡಳಿತದಿಂದ ವಿಶ್ರಾಂತ ಜೀವನ: ನಾಗರೀಕರಿಗೆ ನರಕ ದರ್ಶನ

Bharath Vaibhav
ತಾಲೂಕು ಆಡಳಿತದಿಂದ ವಿಶ್ರಾಂತ ಜೀವನ: ನಾಗರೀಕರಿಗೆ ನರಕ ದರ್ಶನ
WhatsApp Group Join Now
Telegram Group Join Now

ಜಿಲ್ಲಾ ಕೇಂದ್ರ ಶಾಸಕರ ಕನಸು ತಾಲೂಕು ಕಛೇರಿ ಎದುರೇ ಪಾರ್ಕಿಂಗ್  ಫುಟ್ ಪಾತ್ ನಲ್ಲಿ ಅಂಗಡಿ ನಾಮಫಲಕ ಹದಗೆಟ್ಟ ಕಾನೂನು ಸುವ್ಯವಸ್ಥೆ ನಿದ್ರಾವಸ್ಥೆಯಲ್ಲಿ ಅಧಿಕಾರಿ ವರ್ಗ ಅಭಿವೃದ್ದಿಯಲ್ಲಿ ಹಿಂದುಳಿದ ತುರುವೇಕೆರೆ ಟೌನ್ 

ತುರುವೇಕೆರೆ : ತಾಲೂಕು ಕೇಂದ್ರವಾಗಿರುವ ತುರುವೇಕೆರೆ ಪಟ್ಟಣವು ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದ ಅವ್ಯವಸ್ಥೆಗಳ ಆಗರವಾಗಿದೆ. ತಾಲೂಕು ಆಡಳಿತ ವಿಶ್ರಾಂತ ಜೀವನದಲ್ಲಿದ್ದರೆ, ನಾಗರೀಕರು ಹತ್ತಾರು ಸಮಸ್ಯೆಗಳಿಂದ ನರಕ ದರ್ಶನ ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿ ಆಡಳಿತ ಸತ್ತು ಹೋಗಿದೆ. ತಾಲ್ಲೂಕು ಆಡಳಿತ ನಾಗರೀಕರಿಂದ ಶ್ರದ್ಧಾಂಜಲಿ ಸಭೆಗೆ ಕಾಯುತ್ತಿದೆಯೇನೋ ಎಂಬುವಷ್ಟರ ಮಟ್ಟಿಗೆ ತುರುವೇಕೆರೆ ಪಟ್ಟಣ ಅಭಿವೃದ್ದಿ ಎಂಬುದು ಮರೀಚಿಕೆಯಾಗಿ ಹೀನಾಯ ಸ್ಥಿತಿಯಲ್ಲಿದೆ. ಕೇವಲ ಕುರ್ಚಿಗೆ ಅಂಟಿಕೊಂಡಿರುವ ಅಧಿಕಾರಿಗಳಿಂದ ತುರುವೇಕೆರೆ ಪಟ್ಟಣದ ಅಭಿವೃದ್ದಿ ಅಸಾಧ್ಯದ ಮಾತಾಗಿದೆ. ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಬಹಳಷ್ಟು ಕನಸನ್ನು ಹೊಂದಿ ತುರುವೇಕೆರೆಯನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬ ಆಶಯ ಹೊಂದಿರುವ ಶಾಸಕ ಎಂ.ಟಿ.ಕೃಷ್ಣಪ್ಪನವರು ಇಂತಹ ನಿದ್ರಾಸ್ಥಿತಿಯಲ್ಲಿರುವ ಅಧಿಕಾರಿಗಳಿಂದ ಯಾವ ರೀತಿ ಅಭಿವೃದ್ದಿಯ ನಿರೀಕ್ಷೆ ಹೊಂದಿದ್ದಾರೋ ಆ ದೇವರೇ ಬಲ್ಲ.

ತುರುವೇಕೆರೆ ಪಟ್ಟಣ ಅವ್ಯವಸ್ಥೆಯ ತಾಣವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಕಛೇರಿ ಇದೆ. ಈ ಕಛೇರಿಯೊಳಕ್ಕೆ ತಹಸೀಲ್ದಾರ್ ಅವರೇ ಸಲೀಸಾಗಿ ಹೋಗಲು ಸಾಧ್ಯವಿಲ್ಲ. ಕಾರಣ ಮಿನಿವಿಧಾನಸೌಧದ ಮುಂಭಾಗ ಮಿನಿಮಾರ್ಕೆಟ್ ಇದೆ, ಗೇಟಿನ ಮುಂಭಾಗ ವಾಹನ ಪಾರ್ಕಿಂಗ್ ಇದೆ. ತಹಸೀಲ್ದಾರ್ ಅವರಿಗೆ ತಮ್ಮ ಕಛೇರಿ ಎದುರಿನ ಅವ್ಯವಸ್ಥೆ ಸರಿಪಡಿಸಲಾಗಷ್ಟು ಅಸಹಾಯಕರಾಗಿರುವಾಗ ಇನ್ನು ಪಟ್ಟಣ, ತಾಲೂಕಿನ ಕ್ಷೇಮ ಹೇಗೆ ನೋಡಿಕೊಳ್ಳುತ್ತಾರೆ ಎಂದು ಜನತೆ ಮುಸಿಮುಸಿ ನಗುತ್ತಿದ್ದಾರೆ. ಮಿನಿವಿಧಾನಸೌಧದ ಎದುರು 2009-10 ರಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಪೂರ್ಣವಾಗಿಲ್ಲ, ಈಗ ಪ್ರಸ್ತುತ ಬೀದಿಬದಿವ್ಯಾಪಾರಸ್ಥರು ಎಸೆಯುವ ಕಸದ ರಾಶಿಯಿಂದ ಕಸದ ಕೇಂದ್ರವಾಗಿ ಸಂಕೀರ್ಣ ಮಾರ್ಪಟ್ಟಿದೆ.

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಕಳೆದೊಂದು ದಶಕದಿಂದ ನಡೆಯುತ್ತಲೇ ಇದೆ. ನಾಗರೀಕರಿಗೆ ಸಂಪರ್ಕ ನೀಡುವ ಸಮಯ ಇನ್ನೂ ಬಂದೇ ಇಲ್ಲ. 2013 ರಲ್ಲಿ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ಬಂದರೂ ತುರುವೇಕೆರೆಯಲ್ಲಿ ಈವರೆಗೆ ಇಂದಿರಾ ಕ್ಯಾಂಟೀನ್ ಭಾಗ್ಯ ಬಂದೇ ಇಲ್ಲ. ತುರುವೇಕೆರೆ ಪಟ್ಟಣದಲ್ಲಿರುವ ಆಟೋ ಚಾಲಕರಿಗೆ, ಸರಕು ಸಾಗಣೆ ವಾಹನದವರಿಗೆ, ಬಾಡಿಗೆ ಕಾರು ವಾಹನದವರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಾವಕಾಶ ಒದಗಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಪಟ್ಟಣ ಪಂಚಾಯ್ತಿ ಬೀದಿಬದಿ ವ್ಯಾಪಾರಿಗಳ ಸುಂಕಕ್ಕೆ ಮಾತ್ರ ಬಾಯಿಬಿಟ್ಟುಕೊಂಡು ಕೂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಾರ್ಗಸೂಚಿ ಫಲಕವನ್ನೂ ಹಾಕುವ ಗೋಜಿಗೇ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಹಾಗೂ ಸಂಬಂಧಪಟ್ಟ ಇಲಾಖೆ ಹೋಗಿಲ್ಲ. ಆ ಮಾರ್ಗಸೂಚಿ ಫಲಕ ಹಾಕುವ ಕೆಲಸವನ್ನು ಸ್ಥಳೀಯ ಲಯನ್ಸ್ ಕ್ಲಬ್ ಮಾಡಿ ತಾಲೂಕು ಆಡಳಿತದ ಕಾರ್ಯವೈಖರಿ ಎಷ್ಟರಮಟ್ಟಿಗಿದೆ ಎಂಬುದನ್ನು ಜನತೆಗೆ ತೋರಿಸಿದೆ.

ಪಟ್ಟಣದಲ್ಲಿ ದಿನೇ ದಿನೇ ವಾಹನಗಳು ಹೆಚ್ಚಾಗುತ್ತಿದೆಯಾದರೂ ಸಂಚಾರಿ ಕಾನೂನುಗಳು ಮಾತ್ರ ಭದ್ರವಾಗಿಲ್ಲ. ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿದ್ದರೂ, ಬೈಕುಗಳಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದರೂ ಯಾರೂ ಕೇಳುವುದೇ ಇಲ್ಲ. ನೋಪಾರ್ಕಿಂಗ್ ಎಂಬ ನಾಮಫಲಕ ಅಲ್ಲಲ್ಲಿ ಕಂಡುಬಂದರೂ ಅದರ ಮುಂದೆಯೇ ನೂರಾರು ವಾಹನಗಳು ಪಾರ್ಕಿಂಗ್ ಮಾಡಿ ವ್ಯವಸ್ಥೆಯನ್ನು ಅಣಕಿಸುತ್ತಿದೆ. ಎಲ್ಲೆಂದರಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು, ಕಾರುಗಳ ಪಾರ್ಕಿಂಗ್ ಕಂಡುಬರುತ್ತದೆ. ಆದರೆ ಪೊಲೀಸರು ಕಂಡೂ ಕಾಣದಂತೆ ಇರುವುದು ಅವರ ಅಸಹಾಯಕತೆಯನ್ನು ಪ್ರತಿಬಿಂಬಿಸುತ್ತದೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ, ತಿರುವುಗಳಲ್ಲಿ ಸಿಗ್ನಲ್ ಲೈಟ್ ಅಳವಡಿಕೆಯ ಅವಶ್ಯಕತೆಯಿದೆ. ಆದರೆ ತಾಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಈ ಬಗ್ಗೆ ಕ್ರಮವಹಿಸಿಲ್ಲ. ತುರುವೇಕೆರೆಯಲ್ಲಿ ಪಾದಚಾರಿ ಮಾರ್ಗವೆಲ್ಲಾ ರಸ್ತೆಯ ಇಕ್ಕೆಲಗಳ ಅಂಗಡಿಗಳವರ ವ್ಯಾಪಾರ ಸ್ಥಾನವಾಗಿ ಮಾರ್ಪಟ್ಟಿದೆ. ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ತನ್ನ ಅಂಗಡಿಗಳ ವಸ್ತುಗಳನ್ನು, ಬೋರ್ಡ್ ಗಳನ್ನು ಇಟ್ಟುಕೊಂಡಿರುವುದನ್ನು ತೆಗೆಸುವ ನಾಗರೀಕರಿಗೆ ಪಾದಚಾರಿಗಳಿಗೆ ಸುಗಮವಾಗಿ ಭಯಮುಕ್ತರಾಗಿ ಸಂಚರಿಸಲು ಪಾದಚಾರಿ ಮಾರ್ಗ ಏರ್ಪಾಡು ಮಾಡಿಕೊಡುವ ತಾಕತ್ತು ಪಟ್ಟಣ ಪಂಚಾಯ್ತಿಗೆ ಹಾಗೂ ಅಲ್ಲಿನ ಅಧಿಕಾರಿ ವರ್ಗಕ್ಕೆ ಇಲ್ಲವಾಗಿದೆ.

ಅಂತಿಮವಾಗಿ ತಾಲೂಕು ಆಡಳಿತ, ಪಟ್ಟಣ ಪಂಚಾಯ್ತಿ ನಿದ್ರಾವಸ್ಥೆಯಿಂದ ಎದ್ದು ಕಠಿಣ ಕ್ರಮ ಕೈಗೊಳ್ಳುವವರೆಗೆ ತುರುವೇಕೆರೆ ಪಟ್ಟಣ ಅಭಿವೃದ್ದಿ ಕಾಣುವುದಿಲ್ಲ. ತಾಲೂಕು ಕೇಂದ್ರದಲ್ಲಿನ ಅವ್ಯವಸ್ಥೆಯ ಬಗ್ಗೆ ಬೇಸತ್ತಿರುವ ನಾಗರೀಕರು ತಾಲೂಕು ಆಡಳಿತ ಬದುಕಿದೆಯೋ? ಸತ್ತಿದೆಯೋ? ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ವ್ಯವಸ್ಥೆ ಮುಂದುವರೆದರೆ ತಾಲೂಕು ಆಡಳಿತ ಸತ್ತಿದೆ ಎಂದು ತೀರ್ಮಾನಿಸಿ ಶ್ರದ್ಧಾಂಜಲಿ ಸಭೆ ಏರ್ಪಡಿಸಿದರೂ ಅನುಮಾನವಿಲ್ಲ.

 ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!