ಸಿರುಗುಪ್ಪ : ಹೆಲ್ಮೆಟ್ ಜಾಗೃತಿಗಾಗಿ ಪೋಲೀಸ್ ಇಲಾಖೆಯ ಉಪಾಧೀಕ್ಷಕ ಕಛೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಬೈಕ್ ರ‍್ಯಾಲಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪವನ್‌ಕುಮಾರ್.ಎಸ್.ದಂಡಪ್ಪನವರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ ಸರ್ಕಾರದ ಯಾವುದೇ ಉದ್ದೇಶಗಳು ಈಡೇರಬೇಕೆಂದರೆ ಅಧಿಕಾರಿಗಳು ಮೊದಲು ಉದ್ದೇಶಗಳ ಪಾಲನೆ ಮಾಡಬೇಕು. ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ.
ಹೆಲ್ಮೆಟ್ ಧರಿಸುವುದರಿಂದ ಜೀವಕ್ಕೆ ರಕ್ಷಣೆ ದೊರೆಯುತ್ತದೆಂಬುದು ಇದರ ಉದ್ದೇಶವಾಗಿದ್ದು, ನಾವು ಸಹ ನಮ್ಮ ಇಲಾಖೆಗೆ ಒಳಪಡುವ ಎಲ್ಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರು, ಹಾಗೂ ಸದಸ್ಯರಿಗೂ ಜಾಗೃತಿ ಮೂಡಿಸಲಾಗುವುದೆಂದರು.
ಪೋಲೀಸ್ ಉಪಾಧೀಕ್ಷಕ ವೆಂಕಟೇಶ್ ಅವರು ಮಾತನಾಡಿ ಯಾವುದೇ ಇಲಾಖೆಯಿರಲಿ, ಸಾರ್ವಜನಿಕರು ಇರಲಿ ಸರ್ಕಾರದ ಕಾನೂನು ಪಾಲನೆ ಮಾಡಬೇಕಿದೆ. ಆದ್ದರಿಂದ ಕಡ್ಡಾಯವಾಗಿ ಎಲ್ಲರೂ ಹೆಲ್ಮೆಟ್ ಧರಿಸಬೇಕು.
ಕಾನೂನು ಪಾಲನೆಯೊಂದಿಗೆ ನಿಮ್ಮನ್ನೇ ನಂಬಿ ಬದುಕುವ ನಿಮ್ಮ ಕುಟುಂಬದವರಿಗಾದರೂ ಹೆಲ್ಮೆಟ್ ಧರಿಸುವ ಮೂಲಕ ಜೀವವನ್ನು ಕಾಪಾಡಿಕೊಳ್ಳಬೇಕಾಗಿದೆಂದರು.
ನಗರದ ಡಿ.ವೈ.ಎಸ್.ಪಿ ಕಛೇರಿಯಿಂದ ಮಹಾತ್ಮ ಗಾಂಧೀಜಿ ವೃತ್ತ, ಅಂಬೇಡ್ಕರ್ ವೃತ್ತ ಇನ್ನಿತರ ಪ್ರಮುಖ ಬೀದಿಗಳಲ್ಲಿ ಪೋಲೀಸ್ ಇಲಾಖೆಯಿಂದ ಬೈಕ್ ರ‍್ಯಾಲಿ ಮೂಲಕ ಹೆಲ್ಮೆಟ್ ಜಾಗೃತಿ ಮೂಡಿಸುವುದರೊಂದಿಗೆ ಠಾಣೆಯಲ್ಲಿ ಮುಕ್ತಾಯಗೊಂಡಿತು.
ಇದೇ ವೇಳೆ ಸಿ.ಡಿ.ಪಿ.ಓ ಪ್ರದೀಪ್.ಜಿ, ಉಪ ವಿಭಾಗದ ಠಾಣೆಗಳ ವ್ಯಾಪ್ತಿಯ ಸಿಪಿಐ ರುದ್ರಪ್ಪ, ಸುಂದ್ರೇಶ್ ಹೊಳೆಣ್ಣನವರ್, ಸತೀಶ್, ಹನುಮಂತಪ್ಪ, ಪಿ.ಎಸ್.ಐಗಳಾದ ಪರಶುರಾಮ, ತಾರಾಬಾಯಿ, ಸದ್ದಾಂ ಹುಸೇನ್, ಕಾಳಿಂಗ, ಶಶಿಧರ.ವೈ, ಶ್ರೀನಿವಾಸ ಹಾಗೂ ಪೋಲೀಸ್ ಸಿಬ್ಬಂದಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ