ನವದೆಹಲಿ : ಭಾರತೀಯ ನ್ಯಾಯಾಂಗದ ಮುಖ್ಯ ಭಾಗವಾದ ನ್ಯಾಯದೇವತೆಯ ಮೂರ್ತಿ ಬದಲಾಗಿದೆ. ಈ ಹಿಂದೆ ಇದ್ದ ಕಣ್ಣಿಗೆ ಪಟ್ಟಿ ಕಟ್ಟಿದ ದೇವತೆಯ ಬದಲು ಇದೀಗ ಪಟ್ಟಿ ಇಲ್ಲದ ಕಣ್ಣು ತೆರೆದ ನ್ಯಾಯ ದೇವತೆಯ ಮೂರ್ತಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಅನಾವರಣಗೊಳಿಸಲಾಗಿದೆ
ಸೀರೆಯುಟ್ಟ ನ್ಯಾಯ ದೇವತೆಯ ಪ್ರತಿಮೆಯ ಒಂದು ಕೈಯಲ್ಲಿ ತಕ್ಕಡಿ ಇದ್ದು ಮತ್ತೊಂದು ಕೈಯಲ್ಲಿ ಭಾರತದ ಸಂವಿಧಾನ ಪುಸ್ತಕವಿದೆ.
ಈ ಹಿಂದೆ ಇದ್ದ ನ್ಯಾಯದೇವತೆಯ ಮೂರ್ತಿಯು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಒಂದು ಕೈಯಲ್ಲಿ ತಕಡಿ ಹಾಗೂ ಮತ್ತೊಂದು ಕೈಯಲ್ಲಿ ಖಡ್ಗವನ್ನು ಇರಿಸಿಕೊಂಡಂತಿತ್ತು.
ತಕ್ಕಡಿಯ ನ್ಯಾಯದ ತುಲನೆಯನ್ನು ಖಡ್ಗವು ನ್ಯಾಯಾಲಯದ ಅಧಿಕಾರದ ಪ್ರತೀಕವೆಂದು ಪರಿಗಣಿಸಲಾಗಿತ್ತು. ಇನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ದೇವಿಯು ನಿಷ್ಪಕ್ಷಪಾತ ನಿಲುವಿನ ಪ್ರತೀಕವಾಗಿತ್ತು.
ಇದಲ್ಲದೇ ಹಳೆಯ ಮೂರ್ತಿಯು ಪಾಶ್ಚಾತ್ಯ ಉಡುಗೆಯನ್ನು ತೊಟ್ಟಿತ್ತು. ಆದರೆ ಇದೀಗ ಸೀರೆಯುಟ್ಟ ನ್ಯಾಯದೇವತೆಯು ಭಾರತೀಯ ನ್ಯಾಯದಾನ ವ್ಯವಸ್ಥೆಯ ದ್ಯೋತಕವಾಗಿರಲಿದ್ದಾಳೆ.
ಕೋರ್ಟ್‌ನಲ್ಲಿ ನ್ಯಾಯ ದೇವತೆಯ ಪ್ರತಿಮೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿರುವುದನ್ನು ಮಾರ್ಪಡಿಸುವ ಮೂಲಕ ‘ಕಾನೂನು ಇನ್ನು ಮುಂದೆ ಕುರುಡಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಸುಪ್ರೀಂ ಕೋರ್ಟ್ ರವಾನಿಸಿದೆ.
ಈ ಹೊಸ ಪ್ರತಿಮೆಯಲ್ಲಿ ನ್ಯಾಯ ದೇವತೆಯೆ ಕೈಯಲ್ಲಿ ಕತ್ತಿ ಬದಲು ಸಂವಿಧಾನದ ಪುಸ್ತಕವನ್ನು ಬದಲಾಯಿಸುವ ಮುಖಾಂತರ ಸಾಂವಿಧಾನಿಕ ಮೌಲ್ಯಗಳನ್ನು ಮತ್ತಷ್ಟು ಎತ್ತಿ ಹಿಡಿಯಲಾಗಿದೆ.
ಈ ಹೊಸ ರೂಪದ ಪ್ರತಿಮೆಯು ಸುಪ್ರೀಂ ಕೋರ್ಟ್‌ನ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿದೆ. ಬದಲಾದ ಪ್ರತಿಮೆಯ ಸ್ವರೂಪ ನ್ಯಾಯಾಂಗವು ತನ್ನ ವಸಾಹತುಶಾಹಿ ಗತದಿಂದ ವಿರಾಮ ಎಂಬ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.