ವಿಜಯನಗರ: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ್ದ ಆರೋಪದಡಿ ಅರಸೀಕೆರೆ ಠಾಣೆಯ ಪೊಲೀಸರು ಬಸ್ ಚಾಲಕ ಸೇರಿದಂತೆ ಮೂವರನ್ನು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಂಧಿತ ಆರೋಪಿಗಳು ಖಾಸಗಿ ಬಸ್‌ನಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ಆರೋಪದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಪಕ್ಕದ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಜಾತ್ರೆ ಮುಗಿಸಿಕೊಂಡು ತಾನು ಮಕ್ಕಳೊಂದಿಗೆ ಖಾಸಗಿ ಬಸ್‌ನಲ್ಲಿ ಮನೆಯತ್ತ ಬರುತ್ತಿದ್ದೆ. ನಮ್ಮನ್ನು ಬಿಟ್ಟು ಬಸ್‌ನಲ್ಲಿ ಬೇರೆ ಪ್ರಯಾಣಿಕರು ಇರಲಿಲ್ಲ. ಮಕ್ಕಳೊಂದಿಗೆ ಒಬ್ಬಂಟಿ ಮಹಿಳೆ ಇರುವುದನ್ನು ಮೂರು ಜನ ಆರೋಪಿಗಳು ಗಮನಿಸಿದ್ದಾರೆ. ರಸ್ತೆ ಮಧ್ಯೆದಲ್ಲಿ ಬಸ್ ನಿಲ್ಲಿಸಿದ ಚಾಲಕ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಮತ್ತಿಬ್ಬರು ಈ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದರು. ಮಕ್ಕಳು ಹಾಗೂ ನಾನು ಚೀರಾಡುವುದನ್ನು ಕೇಳಿಸಿಕೊಂಡ ಬೈಕ್ ಸವಾರರು ಬಸ್ ಒಳಗೆ ಪ್ರವೇಶಿಸಿದಾಗ, ತನ್ನ ಸ್ಥಿತಿ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಘಟನೆ ಬಳಿಕ ಬಸ್ ಚಾಲಕ ಸೇರಿ ಮೂವರು ಪರಾರಿಯಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಬಸ್ ಅನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.