ಬೆಂಗಳೂರು: ಆದಾಯ ತೆರಿಗೆ ಪಾವತಿ ಬಾಕಿ ಇರುವ ಕಾರಣಕ್ಕೆ ಆಸ್ತಿ ನೋಂದಣಿ ಮಾಡುವುದನ್ನು ನಿರಾಕರಿಸುವಂತಿಲ್ಲ ಎಂದು ರಾಜ್ಯದ ಉಪ ನೋಂದಣಾಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.
ನಿಯಮಬಾಹಿರವಾಗಿ ನೋಂದಣಿ ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನೋಂದಣಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಮಾತ್ರ ಸಬ್ ರಿಜಿಸ್ಟ್ರಾರ್ ಗಳು ಕಾರ್ಯ ನಿರ್ವಹಿಸಬೇಕು.
ಆದಾಯ ತೆರಿಗೆ ಪಾವತಿ ಬಾಕಿ ಇದೆ ಎನ್ನುವ ಕಾರಣ ನೀಡಿ ಹರಾಜಿನ ಮೂಲಕ ಖರೀದಿಸಿದ ಆಸ್ತಿ ನೋಂದಣಿಗೆ ನಿರಾಕರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಹೊಂಬೇಗೌಡ ನಗರದಲ್ಲಿರುವ 6 ಸಾವಿರ ಚದರಡಿ ಅಡಮಾನ ಆಸ್ತಿಯನ್ನು 2022ರ ಮಾರ್ಚ್ ನಲ್ಲಿ ಕೆನರಾ ಬ್ಯಾಂಕ್ ಹರಾಜು ಮಾಡಿದ್ದು, ಭರತ್ ಗೌಡ ಎಂಬುವರು ಖರೀದಿಸಿದ್ದರು. ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ 2022 ಸೆಪ್ಟೆಂಬರ್ ನಲ್ಲಿ ಅವರಿಗೆ ಮಾರಾಟ ಪ್ರಮಾಣ ಪತ್ರ ನೀಡಲಾಗಿತ್ತು.
ಆಸ್ತಿ ನೋಂದಣಿ ಮುದ್ರಾಂಕ ಶುಲ್ಕ ಪಾವತಿಸಿದ ಅರ್ಜಿದಾರರು ತಮ್ಮ ಹೆಸರಿಗೆ ಆಸ್ತಿ ನೋಂದಣಿ ಮಾಡಿಕೊಡಲು ಜೆಪಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ನೋಂದಣಿ ಮಾಡಲು ಅವಕಾಶವಿಲ್ಲವೆಂದು ಉಪ ನೋಂದಣಾಧಿಕಾರಿಗಳು ತಿಳಿಸಿದ್ದರು. 2024ರ ಫೆಬ್ರವರಿ 18ರಂದು ಮತ್ತೆ ಮನವಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.