ಬೆಂಗಳೂರು: ರಾಜ್ಯ ಸಹಕಾರ ಕಾಯಿದೆಯಡಿ ರಚನೆಯಾಗಿರುವ ಸಂಘಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ನಡೆಸಲು ಸಾಮಾನ್ಯ ಪೋರ್ಟಲ್ವೊಂದನ್ನು ರೂಪಿಸುವಂತೆ ರಾಜ್ಯ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬೆಂಗಳೂರಿನ ನಾಗರಭಾವಿಯ ಎಂ.ಆರ್.ರುಕ್ಮಾಂಗದ ವಿಶ್ವಪ್ರಜ್ಞ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿತು. ಹೈಕೋರ್ಟ್ ಅದೇಶ ಪಾಲನೆ ಕುರಿತು ಮುಂದಿನ ನಾಲ್ಕು ವಾರಗಳ ರಾಜ್ಯ ಸರಕಾರ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕು ಎಂದು ತಿಳಿಸಿದೆ.
ಸಹಕಾರ ಸಂಘಗಳು ಸಹಕಾರ ಕಾಯಿದೆ ಮತ್ತು ಅದರಡಿ ರಚಿಸಿರುವ ನಿಯಮಗಳನ್ನು ಪಾಲನೆ ಮಾಡುವ ಕುರಿತಂತೆ ಪರಿಶೀಲನೆ ನಡೆಸಲು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ಸ್ ಮತ್ತು ಇ-ಆಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಒಗ್ಗೂಡಿ ಕಾಮನ್ ಪೋರ್ಟಲ್ ಅನ್ನು ರೂಪಿಸಲು ಇದು ಸೂಕ್ತ ಕಾಲವಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಆ ಪೋರ್ಟಲ್‌ನಲ್ಲಿ ರಾಜ್ಯದ ಎಲ್ಲ ಸಹಕಾರಿ ಸಂಘಗಳ ದತ್ತಾಂಶ ಅಪ್‌ಲೋಡ್ ಮಾಡಬೇಕು. ಯಾವ ಯಾವ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂಬ ವಿವರಗಳು ಒಳಗೊಂಡಿರಬೇಕು. ಸಹಕಾರ ಸಂಘಗಳು ಕಾಯಿದೆ ಮತ್ತು ನಿಯಮಗಳಡಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಅದು ಒಳಗೊಂಡಿರಬೇಕು. ಆ ಪೋರ್ಟ್‌ಲ್ ಅಕ್ಸೆಸ್ ಮಾಡುವ ಅಧಿಕಾರ ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಅವರಗೆ ಲಭ್ಯವಿರಬೇಕು. ಅವರು ಎಲ್ಲಾ ಸಂಘಗಳ ಮೇಲೆ ನಿಗಾ ಇಡುವುದಕ್ಕೆ ಈ ಪೋರ್ಟಲ್ ನೆರವಾಗಲಿದೆ ಎಂದು ನ್ಯಾಯಪೀಠ ಆದೇಶ ನೀಡಿದೆ.
ಸಹಕಾರ ಸಂಘಗಳು ಯಾವುದಾದರೂ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಅಂತಹ ಸಂಘಗಳಿಗೆ ಅಟೋಮೆಟಿಕ್ ರಿಮೈಂಡರ್‌ಗಳನ್ನು ಕಳುಹಿಸಲು ಪೋರ್ಟಲ್ ಸಹಕಾರಿಯಾಗಲಿದೆ. ಎಲ್ಲಾ ರೀತಿಯಲ್ಲಿ ಸಹಕಾರ ಸಂಘಗಳಿಗೆ ಪೋರ್ಟ್‌ಲ್ ಸಾಕಷ್ಟು ಅನುಕೂಲವಾಗಲಿದೆ. ಒಂದು ವೇಳೆ ಸಹಕಾರ ಸಂಘಗಳು ನಿಯಮಗಳ ಅನುಸಾರ ನಡೆಯದಿದ್ದರೆ ಅಂತಹ ಸಂಘಗಳ ವಿರುದ್ಧ ತಕ್ಷಣ ಕ್ರಮಗಳನ್ನು ಜರುಗಿಸಲೂ ಸಹ ಸಾಧ್ಯವಾಗಲಿದೆ ಎಂದು ಪೀಠ ತಿಳಿಸಿದೆ.
ಪ್ರಸ್ತುತ ಸಹಕಾರ ಸಂಘಗಳ ಕಾಯಿದೆ ನಿಯಮ 13ಡಿ ಪ್ರಕಾರ ಸಹಕಾರ ಸಂಘಗಳಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸುವುದು ಕಷ್ಟಕರ, ಎಷ್ಟೋ ಬಾರಿ ನೋಟಿಸ್ ಕಳಹಿಸಲಾಗದು ಅಥವಾ ತಡವಾಗಿ ತಲುಪುತ್ತದೆ ಮತ್ತು ಅದರಿಂದ ಸಹಕಾರ ಸಂಘಗಳಿಗೆ ಆರ್ಥಿಕ ಹೊರೆ ತಗುಲಿ ಸಂಕಷ್ಟಕ್ಕೆ ಒಳಗಾಗುತ್ತವೆ. ಆದರೆ ಪೋರ್ಟಲ್ ಮೂಲಕ ಸಂಘಗಳು ಆಧುನಿಕ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಮೇಲ್, ಎಸ್‌ಎಂಎಸ್, ವಾಟ್ಸಪ್ ಮೂಲಕವೂ ನೋಟಿಸ್‌ಗಳನ್ನು ಕಳುಹಿಸುವುದು ಅತ್ಯಂತ ಸುಲಭ ವಿಧಾನವಾಗಿದೆ ಎಂಬುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.