Ad imageAd image

ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರವನ್ನು ತಹಶೀಲ್ದಾರ್ ಹೊಂದಿಲ್ಲ : ಹೈಕೋರ್ಟ್

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಮಾತ್ರ ತಹಶೀಲ್ದಾರ್ ಹೊಂದಿದ್ದು, ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರಿನ ಹಂಪಿ ನಗರದ ಬಿ. ಗುರುಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.

ಸ್ವತಂತ್ರ ವಿವೇಚನೆ ಬಳಸಿ ತಹಶಿಲ್ದಾರ್ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸುವ ಅಧಿಕಾರವನ್ನು ಉಪ ವಿಭಾಗಾಧಿಕಾರಿ ಹೊಂದಿದ್ದಾರೆ.

ಆದರೆ ಜಾತಿ ಪರಿಶೀಲನಾ ಸಮಿತಿಯ ನಿರ್ದೇಶನದ ಮೇರೆಗೆ ಜಾತಿ ಪ್ರಮಾಣ ರದ್ದುಪಡಿಸಿ ತಹಶೀಲ್ದಾರ್ ಹೊರಡಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆ ನಡೆಸುವ ಅಧಿಕಾರ ಉಪವಿಭಾಗಾಧಿಕಾರಿಗಳಿಗಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತಾನು ಪಡೆದುಕೊಂಡ ಪರಿಶಿಷ್ಟ ಜಾತಿ ಪಂಗಡ ಪ್ರಮಾಣ ಪತ್ರ ರದ್ದುಪಡಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಬೆಂಗಳೂರಿನ ಬಿನ್ನಿಪೇಟೆ ನಿವಾಸಿ ಎಂ. ಗಾಯತ್ರಿ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಮುಂದಿದ್ದ ಪ್ರಕ್ರಿಯೆಯನ್ನು ನ್ಯಾಯಪೀಠ ರದ್ದುಪಡಿಸಿದೆ. ಪ್ರಕರಣ ಸಂಬಂಧ ಕಾನೂನು ಪ್ರಕಾರ ಪರಿಹಾರ ಪಡೆಯಲು ಅರ್ಜಿದಾರರು ಮತ್ತು ಪ್ರತಿವಾದಿ ಗಾಯತ್ರಿ ಅವರಿಗೆ ಮುಕ್ತ ಅವಕಾಶವಿದೆ ಎಂದು ತಿಳಿಸಿದೆ.

ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ 2015ರ ಜೂನ್ 30ರಂದು ಬಿನ್ನಿಪೇಟೆಯ ಎಂ. ಗಾಯತ್ರಿ ಅವರು ನಾಯಕ ಸಮುದಾಯಕ್ಕೆ ಸೇರಿದ್ದಾರೆ ಎಂದು ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ವಿತರಿಸಿದ್ದರು. ಈ ಪತ್ರ ಆಧರಿಸಿ ಗಾಯಿತ್ರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದರು.

2015ರ ಸೆಪ್ಟೆಂಬರ್ 5 ರಂದು ಸಿವಿಲ್ ಹಕ್ಕುಗಳ ಜಾರಿ ನಿರ್ದೇಶನಾಲಯದ ಮುಂದೆ ದೂರು ಸಲ್ಲಿಸಿದ್ದಾರೆ. ಗಾಯಿತ್ರಿ ಅವರು ಮೋಸದಿಂದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ದೂರು ನೀಡಿದ್ದರು.

ಈ ದೂರು ಬೆಂಗಳೂರಿನ ಜಿಲ್ಲಾ ಜಾತಿ ಪರಿಶೀಲನ ಸಮಿತಿಗೆ ವರ್ಗಾವಣೆಯಾಗಿದ್ದು, ಅರ್ಜಿ ವಿಚಾರಣೆ ನಡೆಸಿದ್ದ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅವರು, ಗಾಯತ್ರಿ ಅವರಿಗೆ ವಿತರಿಸಿದ್ದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು 2018 ರ ಜೂ. 26ರಂದು ರದ್ದುಪಡಿಸಿ ಆದೇಶಿಸಿದ್ದರು.

ಈ ಆದೇಶ ಆಧರಿಸಿ ಗಾಯತ್ರಿ ಅವರಿಗೆ ವಿತರಿಸಿದ್ದ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ 2020 ಸೆಪ್ಟಂಬರ್ 23ರಂದು ತಹಶೀಲ್ದಾರ್ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಗಾಯತ್ರಿ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದರು.

ಆ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜಾತಿ ಪ್ರಮಾಣ ಪತ್ರ ರದ್ದತಿ ಪ್ರಶ್ನಿಸಿದ ಮೇಲ್ಮನವಿ ಪರಿಗಣಿಸುವ ಅಧಿಕಾರ ಉಪವಿಭಾಗಾಧಿಕಾರಿಗೆ ಇಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಹೊರಡಿಸಿದ್ದ ಆದೇಶದ ಅನುಸಾರ ಗಾಯತ್ರಿ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ.

ಅದು ಬಿಟ್ಟು ಸ್ವತಂತ್ರವಾದ ವಿಚಾರಣೆ ನಡೆಸಿ ಆದೇಶ ಮಾಡಿಲ್ಲ. ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗಿಂತ ಕಡಿಮೆ ಶ್ರೇಣಿಯ ಹಾಗೂ ಅವರ ಅಧೀನದ ಅಧಿಕಾರಿಯಾಗಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಸಮಿತಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಡೆಸಲು ಉಪ ವಿಭಾಗಾಧಿಕಾರಿಗೆ ಅಧಿಕಾರವಿಲ್ಲ ಎಂದು ವಾದಿಸಿದ್ದರು.

ತಹಶೀಲ್ದಾರ್ ಅವರಿಗೂ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿ ತಿರಸ್ಕರಿಸುವ ಅಥವಾ ಸಮ್ಮತಿಸುವ ಅಧಿಕಾರ ಇದೆಯೇ ಹೊರತು ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರ ಇಲ್ಲ. ಜಾತಿ ಪರಿಶೀಲನಾ ಸಮಿತಿ ಮಾತ್ರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸುವ ಅಧಿಕಾರ ಹೊಂದಿದೆ.

ಹಾಗಾಗಿ ಪ್ರಕರಣ ಸಂಬಂಧಪಟ್ಟ ಅಧಿಕಾರಿ ಮುಂದೆ ಇರುವ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿದ್ದು, ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ ಜಾತಿ ಪ್ರಮಾಣ ಪತ್ರ ರದ್ದು ಮಾಡುವ ಅಧಿಕಾರ ತಹಶೀಲ್ದಾರ್ ಗೆ ಇಲ್ಲ ಎಂದು ಹೇಳಿದೆ.

WhatsApp Group Join Now
Telegram Group Join Now
Share This Article
error: Content is protected !!