ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನಗರ ಸಿಟಿ ಸಿವಿಲ್ ನ್ಯಾಯಾಲಯ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ರಾಜ್ಯ ಸರ್ಕಾರ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಮುಂದುವರೆಯಲಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಹನುಮನರಸಯ್ಯ ತಿಳಿಸಿದ್ದಾರೆ.
ಸೆಪ್ಟೆಂಬರ್ 17ರಿಂದ ನೌಕರರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಚುನಾವಣೆ ಕಣದಲ್ಲಿ ಇರುವವರ ಪಟ್ಟಿ, ಅವಿರೋಧ ಆಯ್ಕೆಯಾದವರ ಪಟ್ಟಿ ಪ್ರಕಟಣೆ ಸೇರಿದಂತೆ ಅನೇಕ ಪ್ರಕ್ರಿಯೆಗಳು ನಡೆದಿದ್ದು, ಈ ನಡುವೆ ದ್ವಿತೀಯ ದರ್ಜೆ ಸಹಾಯಕ ಕೃಷ್ಣಯ್ಯ ನ್ಯಾಯಾಲಯದಲ್ಲಿ ದಾವೆ ಹೂಡಿ ನಿವೃತ್ತ ಉಪ ಕಾರ್ಯದರ್ಶಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿರುವುದು ಬೈಲಾಕ್ಕೆ ವಿರುದ್ಧವಾಗಿದೆ.
ಹೀಗಾಗಿ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ್ದರು. ಸಂಘಕ್ಕೆ ನೋಟಿಸ್ ನೀಡದೆ ನ್ಯಾಯಾಲಯ ಏಕಪಕ್ಷೀಯವಾಗಿ ತಡೆಯಾಜ್ಞೆ ನೀಡಿದ್ದು, ಇದನ್ನು ಹೈಕೋರ್ಟ್ ತೆರವುಗೊಳಿಸಿದೆ.