ಹುಬ್ಬಳ್ಳಿ: ಬಾಲಕಿಯ ರೇಪ್ & ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಆರೋಪಿ ಮೃತದೇಹ ಶವಾಗಾರದಲ್ಲಿ ಅನಾಥವಾಗಿಬಿಟ್ಟಿತ್ತು. ಹೀಗಾಗಿ ಆರೋಪಿ ರಿತೇಶ್ ಕುಮಾರ್ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡದಂತೆ ತಡೆ ನೀಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಇಂದು ಬೆಳಗ್ಗೆ ಹೈಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆಯೇ ಮುಖ್ಯನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು, ಎನ್ಕೌಂಟರ್ಗೆ ಗುರಿಯಾದ ರಿತೇಶ್ ಮೃತದೇಹವನ್ನು ಶವಸಂಸ್ಕಾರ ಮಾಡದಂತೆ ತಡೆ ನೀಡಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್, ಕೊನೆಗೂ ಶವಸಂಸ್ಕಾರ ತಡೆ ಬಗೆಗಿನ ಅರ್ಜಿ ಬಗ್ಗೆ ಪ್ರಮುಖ ತೀರ್ಪು ನೀಡಿದೆ. ಮೃತದೇಹವನ್ನು ಹೂಳಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಇದರಿಂದ ಅರ್ಜಿದಾರರ ಮನವಿ ಪರಿಗಣಿಸಬೇಕಿಲ್ಲ. ರಿತೇಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕು. ಅಲ್ಲದೇ ಇದರ ವಿಡಿಯೋ ಕೂಡ ಮಾಡಬೇಕು. ಮೃತದೇಹದ ಮಾದರಿ ಸಂಗ್ರಹಿಸಿಡಬೇಕೆಂದು ಹೈಕೋರ್ಟ್ ಆದೇಶ ನೀಡಿ, ಅರ್ಜಿಯನ್ನು ಇತ್ಯರ್ಥ ಮಾಡಿದೆ.