ಬೆಂಗಳೂರು : ರಾಜ್ಯದ ವಸತಿ ಶಾಲೆಗಳಿಗಲ್ಲೂ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (RTE) 2009 ಕಾಯಿದೆಯ ಅಂಶಗಳು ಅನ್ವಯವಾಗುತ್ತವೆ ಎಂದು ಹೈಕೋರ್ಟ್ ಆದೇಶ ಹೊರಡಸಿದೆ.
ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವಿಲ್ಲದೇ ಶಾಲೆ ನಡೆಸುತ್ತಿರುವ ಮೈಸೂರಿನ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಆರ್‌ಟಿಇ ಕಾಯಿದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರಂತೆ, ನಮೂನೆ-1ರಂತೆ ಸರ್ಕಾರ ಹೊರತುಪಡಿಸಿ ಇತರ ಎಲ್ಲ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಆರ್‌ಟಿಇ ಕಾಯಿದೆಯ ಸೆಕ್ಷನ್ 18(1) ಅನ್ನು ಉಲ್ಲೇಖಿಸಿರುವ ನ್ಯಾಯಪೀಠ, ಈ ಕಾಯಿದೆಯ ಗೆಜೆಟ್ 2012ರ ಏ.28ರಂದು ಆಗಿದೆ. ಆದಾದ ನಂತರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು. ಆದರೆ ಪಡೆದಿಲ್ಲ, ಆ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಹೈಕೋರ್ಟ್ ಪೀಠ ತಿಳಿಸಿದೆ.