ಬೆಂಗಳೂರು : ರಾಜ್ಯದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರಿಂದ ಮುಗ್ಧ ಜನರ ಪ್ರಾಣಕ್ಕೆ ಅಪಾಯ ಎದುರಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.
ಖಾಸಗಿ ವೈದ್ಯಕೀಯ ವೃತ್ತಿ ನಡೆಸಲು ಕೋರಿರುವ ಅರ್ಜಿಯನ್ನು ಪರಿಗಣಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಎ.ಎ.ಮುರಳೀಧರ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ವಿಚಾರಣೆ ನಡೆಸಿ ಇಂದು ವಜಾಗೊಳಿಸಿದೆ.
ಅರ್ಜಿದಾರ ಕೇವಲ SSLC ವರೆಗೆ ಓದಿದ್ದಾರೆ. ಭಾರತೀಯ ಪರ್ಯಾಯ ಔಷಧ ಮಂಡಳಿ ನೀಡಿದೆ ಎಂಬ ಪ್ರಮಾಣ ಪತ್ರ ಹೊಂದಿದ್ದಾರೆ. ಅಲೋಪತಿ, ಆಯುರ್ವೇದ, ಯುನಾನಿ ಸೇರಿ ಯಾವುದೇ ವಿಭಾಗದಲ್ಲಿ ಸೂಕ್ತ ಶೈಕ್ಷಣಿಕ ಅರ್ಹತೆ ಇಲ್ಲ. ಹೀಗಿದ್ದೂ ವೈದ್ಯ ಪದ್ಧತಿ ಅನುಸರಿಸುತ್ತಿದ್ದಾರೆ.
ಆ ಮೂಲಕ ತಾವೇ ವೈದ್ಯರೆಂದು ಬಿಂಬಿಸಿಕೊಳ್ಳುವ ಸ್ವಘೋಷಿತ ನಕಲಿ ವೈದ್ಯರು, ದೂರದ ಪ್ರದೇಶಗಳಲ್ಲಿ ಕ್ಲಿನಿಕ್ಗಳನ್ನು ಆರಂಭಿಸಿ ಜನರಿಗೆ ಮೋಸ ಮಾತ್ರವಲ್ಲ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಇದು ಅತ್ಯಂತ ಹಾನಿಕಾರಕ ಎಂದು ಕೋರ್ಟ್ಆಕ್ಷೇಪ ವ್ಯಕ್ತಪಡಿಸಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಅರ್ಹತೆ ಇಲ್ಲದವರು ನಡೆಸುತ್ತಿರುವ ಕ್ಲಿನಿಕ್‌ಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಲೇಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶದ ಪ್ರತಿಯನ್ನು ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ತಲುಪಿಸಿ ಎಂದಿರುವ ಪೀಠವು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ. ಅಲ್ಲದೇ ಕೈಕೈಗೊಂಡ ಕ್ರಮಗಳ ವರದಿಯನ್ನು ಕೋರ್ಟ್ಗೆ ಸಲ್ಲಿಸಬೇಕು ಎಂದೂ ಆದೇಶ ಹೊರಡಿಸಿದೆ.