ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ವಿರುದ್ದ ಪೊಲೀಸ್ ಇಲಾಖೆ ಸಲ್ಲಿಸಿರುವ ಆರೋಪ ಪಟ್ಟಿಯ ವಿವರಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಹೈಕೋರ್ಟ್ ಆದೇಶ ನೀಡಿದೆ.
ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು, ಈ ಆದೇಶವನ್ನು ಉಲ್ಲಂಘಿಸಿದ ಮಾಧ್ಯಮಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಸೂಚನೆ ನೀಡಿದೆ.ಜೊತೆಗೆ, ಆದೇಶದ ಪ್ರತಿಯನ್ನು ಎಲ್ಲಾ ಪ್ರಮುಖ ಮಾಧ್ಯಮಗಳಿಗೂ ಸಹ ರವಾನಿಸುವಂತೆ ಕೋರ್ಟ್ ಸೂಚಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಗ್ಯಾಂಗ್ ಬಗ್ಗೆ ಆರೋಪ ಪಟ್ಟಿಯಲ್ಲಿ ಇಂಚಿಂಚೂ ಮಾಹಿತಿಯನ್ನು ನೀಡಲಾಗಿತ್ತು. ಆರೋಪಿಗಳ ಸಿಸಿಟಿವಿ ದೃಶ್ಯಾವಳಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಪೋಸ್ಟ್ ಮಾರ್ಟಮ್ ವರದಿಗಳು ಗ್ಯಾಂಗ್ ನ ಕ್ರೌರ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟಿತ್ತು. ಪೊಲೀಸರು ತನಿಖೆಯಿಂದ ಬಹಿರಂಗಪಡಿಸಿದ್ದ ಈ ಆರೋಪಪಟ್ಟಿಯನ್ನು ಎಲ್ಲಾ ಮಾಧ್ಯಮಗಳೂ ಸಹ ಯಥಾವತ್ತಾಗಿ ಪ್ರಕಟಿಸಿದ್ದವು.
ಗೃಹಸಚಿವ ಜಿ. ಪರಮೇಶ್ವರ್ ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಆರೋಪ ಪಟ್ಟಿ ಗೌಪ್ಯ ಮಾಹಿತಿಯೇನಲ್ಲ ಎಂದು ನುಡಿಯುವ ಮೂಲಕ, ಮಾಧ್ಯಮಗಳ ಪರವಾಗಿ ಹೇಳಿಕೆ ನೀಡಿದ್ದರು.