ಬೆಂಗಳೂರು: ಮನೆಯ ಮೇಲಿಂದ ಪತ್ನಿಯನ್ನು ತಳ್ಳಿ ಕೊಲೆ ಮಾಡಿದ ಆರೋಪದಲ್ಲಿ ಪತಿಯ ವಿರುದ್ಧದ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ದೋಷಾರೋಪ ಪಟ್ಟಿ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಆರ್‌ಎಂಸಿಯಾರ್ಡ್ ಠಾಣಾ ಪೊಲೀಸರು ದಾಖಲಿಸಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಯಶವಂತಪುರ ನಿವಾಸಿ ದೇವೇಂದ್ರ ಭಾಟಿಯಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ತಿಳಿದುಬರುತ್ತದೆ. ಏನೂ ವಿಚಾರವಿರದೇ ಮಕ್ಕಳು ಯಾಕೆ ತಂದೆಯ ವಿರುದ್ಧ ಈ ಪರಿ ಅಪಾದನೆ ಮಾಡುತ್ತಾರೆ? ಅಷ್ಟೇ ಅಲ್ಲದೆ ಪ್ರಕರಣ ಸಂಬಂಧ ಇದುವೆರೆಗೂ ವಾರೆಂಟ್ ಜಾರಿಗೊಳಿಸಲಾಗಿಲ್ಲ. ಹೀಗಿರುವಾಗ ಆರೋಪಿಗೆ ರಕ್ಷಣೆ ನೀಡುವ ಪ್ರಮೇಯವಿಲ್ಲ. ಅರ್ಜಿಯಲ್ಲಿನ ಉಲ್ಲೇಖಿಸಲಾಗಿರುವ ಎಲ್ಲ ಸಂಗತಿಗಳು ಆರೋಪಿಯ ಕಾಲ್ಪನಿಕ ಆಲೋಚನೆ ಬಿತ್ತರಿಸುತ್ತದೆ ಹೊರತು ಸತ್ಯಾಂಶ ಅಡಗಿಲ್ಲ ಎಂದಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ?: 2018ರಲ್ಲಿ ನಗರದ ಯಶವಂತಪುರ ನಿವಾಸಿ ದೇವೇಂದ್ರ ಭಾಟಿಯಾ ತನ್ನ ಪತ್ನಿಯನ್ನು ಮನೆಯ 16ನೇ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿರುವುದಾಗಿ ದೇವೇಂದ್ರ ಅವರ ಪುತ್ರನೇ ಪೊಲೀಸರಿಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಎಂಸಿ ಯಾರ್ಡ್ ಠಾಣಾ ಪೊಲೀಸರು ಕೊಲೆ ಮತ್ತು ಕೌಟುಂಬಿಕ ದೌರ್ಜನ್ಯದಡಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಹೈಕೋರ್ಟ್ಗೆ ದೇವೇಂದ್ರ ಅರ್ಜಿ ಸಲ್ಲಿಸಿದ್ದರು.



