ಸಿರುಗುಪ್ಪ : 11ನೇ ದಿನದ ಗಣೇಶ ವಿಸರ್ಜನೆ ನಿಮಿತ್ತ ಹಿಂದೂ ಮಹಾಸಭಾ ಗಣಪತಿಯ ಸಮಿತಿಯಿಂದ ಗಣೇಶೋತ್ಸವ ಶೋಭಾಯಾತ್ರೆಯು ಶನಿವಾರದಂದು ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ 11ರಿಂದ ಪೂಜೆ, ಹೋಮ, ಮಹಾಮಂಗಳಾರತಿಗೈದು ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭವಾದ ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ಪಾಲ್ಗೊಂಡು ಹಿಂದೂ ಕಾರ್ಯಕರ್ತರೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಭವ್ಯ ಮೆರವಣಿಗೆಯಲ್ಲಿ ನೇಹಾ ಕಲಾರಂಗದಿಂದ ಡೊಳ್ಳು, ಚಂಡಿವಾದ್ಯ, ತಾಷೆ ವಾಲಗ, ತಮಟೆಗಳ ಸದ್ದು ಮೇಳೈಸಿದವು.
ಯಕ್ಷಗಾನದಂತಹ ದೃಶ್ಯಗಳಲ್ಲಿ ಮಹಿಳೆಯರು ನರ್ತಿಸುವ ಮೂಲಕ ಮಾಸಿ ಹೋಗುತ್ತಿರುವ ಜನಪದ ಕಲೆಯ ಕಳೆಯನ್ನು ಇಮ್ಮಡಿಗೊಳಿಸಿದರು.
ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿ ಬರುವ ಪಾತ್ರಗಳ ವೇಷಧಾರಿಗಳು ನೆರೆದಿದ್ದ ಜನರ ಬಳಿ ಹೋಗಿ ಮನರಂಜಿದರು.
ಹಲವಾರು ಯುವಕರು ತಮ್ಮ ಮೊಬೈಲ್‌ಗಳಲ್ಲಿ ವೇಷಧಾರಿಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡರು ಸಂತಸಪಟ್ಟರು.
ನಾಗಸಾಧುಗಳ ವೇಷಧಾರಿಗಳ ಶಿವನ ರುದ್ರ ತಾಂಡವದ ನೃತ್ಯಗೈದು ಕುಂಭಮೇಳದ ದೃಶ್ಯವನ್ನು ಮರುಕಲ್ಪಿಸಿದರು.

ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ಆಧುನಿಕ ಯುಗದಲ್ಲಿ ರಾಜ ಮಹಾರಾಜರ ಕಾಲದಲ್ಲಿ ಗತಕಾಲದ ವೈಭವಗಳನ್ನು, ಮರುಕಳಿಸಿ ಕಣ್ಣ ಮುಂದೆ ಕಟ್ಟುವಂತಿತ್ತು.
ಪ್ರತಿವರ್ಷದಂತೆ ತಾಲೂಕಿನ ಹಲವಾರು ಗ್ರಾಮಗಳಿಂದ ಜನಸಾಗರವೇ ಹರಿದು ಬಂದಿತ್ತು.
ಈ ಬಾರಿ ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿದ್ದು, ಮೆರವಣಿಗೆಯುದ್ದಕ್ಕೂ ದೊಡ್ಡ ದೊಡ್ಡ ಧ್ವನಿವರ್ಧಕಗಳ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಯುವಕರು ಕೇಸರಿ ಧ್ವಜಗಳನ್ನು ತಿರುಗಿಸಿ ಸಂಭ್ರಮಿಸಿದರು.
ಹಿಂದೂ ಮಹಾಸಭಾ ಗಣಪತಿ ಸಮಿತಿಯಿಂದ ನಗರದ ಕೆಲವಡೆ ಜೆ.ಸಿ.ಬಿ. ಯಂತ್ರದ ಮೇಲೆ ನಿಂತು ಪುಷ್ಪಾರ್ಚನೆ ಮಾಡಲಾಯಿತು.
ಕಣ್ಣು ಹಾಯಿಸಿದೆಲ್ಲೆಡೆ ರಸ್ತೆಯ ಇಕ್ಕೆಲಗಳು, ಪಕ್ಕದಲ್ಲಿನ ಕಟ್ಟಡಗಳ ಮೇಲೆ ನಿಂತು ಮಹಿಳೆರು ಮತ್ತು ಮಕ್ಕಳು ಗಣೇಶೋತ್ಸವದ ಶೋಭಯಾತ್ರೆಯನ್ನು ವೀಕ್ಷಿಸಿದರು. ಅಲ್ಲಿಂದಲೇ ಗಣಪತಿ ಬಪ್ಪಾ ಮೋರಯಾ ಎಂದು ಜೈಕಾರ ಹಾಕಿದರು.
ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ.ವಿ.ಜೆ, ಎ.ಎಸ್.ಪಿ ಕೆ.ಪಿ.ರವಿಕುಮಾರ್ ಅವರು ಇನ್ನಿತರ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತಾ ಶೋಭಯಾತ್ರೆಗೆ ಬೇಕಾದ ಸೂಕ್ತ ಭದ್ರತೆಯನ್ನು ಒದಗಿಸಿದರು.
ರಾತ್ರಿ 9ಗಂಟೆಯವರೆಗೂ ಜರುಗಿದ ಮೆರವಣಿಗೆಯ ಬಳಿಕ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಹತ್ತಿರದ ತುಂಗಾಭದ್ರ ನದಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ವಿಸರ್ಜನೆ ಮಾಡಲಾಯಿತು.
ವರದಿ : ಶ್ರೀನಿವಾಸ ನಾಯ್ಕ




