ಶಿವಮೊಗ್ಗ: ‘ಹಿಂದುತ್ವ’ದ ಕುರಿತ ಎಲ್ಲರೂ ಕೂಡ ಒಂದೊಂದು ರೀತಿಯ ವ್ಯಾಖ್ಯಾನ ನೀಡುತ್ತಾರೆ. ಅದೇ ರೀತಿ, ಚರ್ಚೆಗಳು ಕೂಡ ನಡೆಯುತ್ತವೆ. ಕೆಲವರು ಹಿಂದುತ್ವವೆಂದರೆ ಜೀವನ ಶೈಲಿಯಂತಲೂ ಕರೆಯುವುದುಂಟು.
ಆದರೆ, ನನ್ನ ಗ್ರಹಿಕೆಯಲ್ಲಿ ಹಿಂದುತ್ವ ಎಂದರೆ, ಹಿಂದುಳಿದ ಎಲ್ಲಾ ವರ್ಗದವರನ್ನು ಮುಖ್ಯ ವಾಹಿನಿಗೆ ಕರೆತರಬೇಕು.ಕೈ ಹಿಡಿದು ಮೇಲೆತ್ತಬೇಕು. ಇದು ಹಿಂದುತ್ವದ ಪರಿಕಲ್ಪನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ಭಾವನಾತ್ಮಕ ಭಾವನೆಯನ್ನು ಹೊಂದಿದ್ದಾರೆ. ಇಲ್ಲಿ ಜನಸಾಮಾನ್ಯರ ಬೇಡಿಕೆಗಳು ಇಂಗಿತಗೊಂಡಿಲ್ಲ. ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಜನ ಸಾಮಾನ್ಯರ ಹತ್ತಿರದಿಂದ ಮಾತನಾಡಿದ್ದೇವೆ. ಕೆಲವು ಸಮಸ್ಯಗಳ ಬಗ್ಗೆ ಅಳಲು ತೋಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಮ್ಮ ಸಮಸ್ಯೆ ಆಲಿಸಲು ಯಾರೂ ಕೂಡ ಬಂದಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ. ಆದ್ದರಿಂದ ಇಲ್ಲಿ ಕೆಲಸ ಮಾಡಲು ಮನಸ್ಸು ಬೇಕು. ಆ ಮನಸ್ಸು ಪತ್ನಿ ಗೀತಾಗೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ‘ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳು ಈ ಬಾರಿಯ ಲೋಕಸಭಾ ಚುನಾವಣೆಯ ಗೆಲುವಿಗೆ ನನಗೆ ಸಹಕಾರಿಯಾಗಲಿವೆ’ ಎಂದು ಹೇಳಿದ್ದಾರೆ.
‘ಜಿಲ್ಲೆಯಾದ್ಯಂತ ಪ್ರತಿ ಮನೆಗಳಿಗೆ ತೆರಳಿ ಮತಯಾಚನೆ ನಡೆಸಲಾಗಿದೆ. ಅದೇ ರೀತಿ, ಕ್ಷೇತ್ರದೆಲ್ಲೆಡೆ ಜನರು ಹೆಚ್ಚಿನ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಗೆಲುವು ನಿಶ್ಚಿತ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಮಾತನಾಡಿ, ಭದ್ರಾವತಿ ತಾಲ್ಲೂಕಿನ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ, ಬಿಜೆಪಿಯ ದುರಾಡಳಿತದಿಂದ ಕ್ಷೇತ್ರದ ರಕ್ಷಣೆ ಸೇರಿದಂತೆ ಬಗರ್ ಹುಕುಂ, ಮುಳುಗಡೆ ಸಂತ್ರಸ್ತರ ಪರ ಕೇಂದ್ರದಲ್ಲಿ ದ್ವನಿಗೂಡಿಸಲು ಗೀತಕ್ಕ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಅದೇ ರೀತಿ, ಬಿಜೆಪಿಯ ಸುಳ್ಳು ಆಶ್ವಾಸನೆಗಳಿಂದ ಕ್ಷೇತ್ರದ ರಕ್ಷಣೆ ಅಸಾಧ್ಯವೆಂದು ಸಾರಲು ಗೀತಕ್ಕ ಅವರ ಗೆಲುವು ಅನಿವಾರ್ಯ ಎಂದರು.ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿ.ಡಿ.ಮಂಜುನಾಥ ಮೊದಲಾದವರು ಇದ್ದರು.