ಕಾರವಾರ: ರಂಗು ರಂಗಿನ ಹಬ್ಬ ಹೋಳಿಯನ್ನು ಕರಾವಳಿಯಲ್ಲಿ ಪರಸ್ಪರ ಬಣ್ಣ ಹಚ್ಚಿ ಶುಭಾಶಯಗಳನ್ನು ಕೋರುವುದರ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು. ಯುವಕ, ಯುವತಿಯರು ತಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಹಾಡುಗಳಿಗೆ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು. ನಂತರ ಸಮುದ್ರಸ್ನಾನ ಮಾಡುವ ಮೂಲಕ ತುಂಬಾ ವಿಶೇಷವಾಗಿ ಸಡಗರದಿಂದ ಆಚರಿಸಲಾಯಿತು.
ಹೌದು, ಕರಾವಳಿಯ ಕಾರವಾರದಲ್ಲಿ ಮುಂಜಾನೆಯಿಂದಲೇ ಯುವಕರ ಗುಂಪುಗಳು ವಿವಿಧೆಡೆಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿತ್ತು. ದಾರಿ ಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಶುಭಾಶಯಗಳನ್ನು ಹಂಚಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.