ಕೊಪ್ಪಳ: ತಂತ್ರಜ್ಞಾನ ಬೆಳದಂತೆಲ್ಲ ಬಾಲ್ಯದಲ್ಲಿಯೇ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಮಾನಸಿಕ ಖಿನ್ನತೆ ಜೊತೆಗೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇದನ್ನರಿತ ಶಿಕ್ಷಕರ ತಂಡ ಶಾಲೆಯ ಮಕ್ಕಳಿಗೆ ಮನೆ ಮನೆಯಲ್ಲಿ ಸ್ವಂತ ಗ್ರಂಥಾಲಯ ನಿರ್ಮಿಸಿಕೊಳ್ಳಲು ಪ್ರೇರೇಪಿಸಿದ್ದಾರೆ.
“ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಮನೆ ಮನೆ ಗ್ರಂಥಾಲಯ ಎಂಬ ಕಲ್ಪನೆಯಲ್ಲಿ ಗ್ರಂಥಾಲಯ ನಿರ್ಮಿಸಿಕೊಳ್ಳಲು ಪಾಲಕರೊಂದಿಗೆ ಚರ್ಚಿಸಿ ಮಗುವಿನ ಗ್ರಂಥಾಲಯಕ್ಕೆ ಸಹಕಾರ ನೀಡುವಂತೆ ಪ್ರೇರೇಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಮನೆಯಲ್ಲಿಯೂ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ” ಎನ್ನುತ್ತಾರೆ ಶಾಲೆಯ ಮುಖ್ಯೋಪಾದ್ಯಾಯ ಮಹ್ಮದ್ ಖಾಜಾಹುಸೇನ್ ವಂಟೇಳಿ.
34 ಶಾಲಾ ಮಕ್ಕಳ ಮನೆಯಲ್ಲಿ ಗ್ರಂಥಾಲಯ: ಟಿವಿ, ಇಂಟರ್ನೆಟ್, ಸ್ಮಾರ್ಟ್ ಫೋನ್ ಲಗ್ಗೆ ಇಡುವ ಮೊದಲು ಅಂದು ಮನೆಯಲ್ಲಿಯ ಪಾಲಕರು ಸಹ ಪುಸ್ತಕ ಓದುವ ಹವ್ಯಾಸವಿಟ್ಟುಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪಾಲಕರ ಜತೆ ಮೊಬೈಲ್ ನೋಡುವುದರಲ್ಲಿ ಮಕ್ಕಳು ಸಹ ತಲ್ಲೀನರಾಗಿರುತ್ತಾರೆ. ಇದರಿಂದಾಗಿ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ ಎಂಬ ಅಭಿಪ್ರಾಯವಿದೆ. ಮೊಬೈಲ್ ಎಂಬ ಗೀಳನ್ನು ಬಿಡಿಸುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ಮನೆಯಲ್ಲಿ ಗ್ರಂಥಾಲಯ ನಿರ್ಮಿಸಲು ಶಿಕ್ಷಕರು ಪ್ರೇರೇಪಿಸಿದರು. ಈಗ 34 ಮಕ್ಕಳು ತಮ್ಮ ಮನೆಯಲ್ಲಿ ಸ್ವಂತ ಗ್ರಂಥಾಲಯವನ್ನು ಹೊಂದಿದ್ದಾರೆ.
ಪುಸ್ತಕ ಓದಿನತ್ತ ಮಕ್ಕಳ ಚಿತ್ತ: ಮಿಯಾಪುರ ಸರಕಾರಿ ಶಾಲೆಯಲ್ಲಿ ಒಟ್ಟು 150 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 5,6 ಹಾಗೂ 7 ತರಗತಿಯಲ್ಲಿ 68 ಮಕ್ಕಳು ಓದುತ್ತಿದ್ದಾರೆ. ಅವರಲ್ಲಿ ಈಗ 34 ಮಕ್ಕಳು ಗ್ರಂಥಾಲಯ ನಿರ್ಮಿಸಿಕೊಂಡು ತಮ್ಮ ಗ್ರಂಥಾಲಯದಲ್ಲಿ ರಾಷ್ಟ್ರೀಯ ನಾಯಕರು, ಸಾಮಾನ್ಯಜ್ಞಾನ ಸೇರಿದಂತೆ ವಿವಿಧ ಪುಸ್ತಕಗಳನ್ನು ಇಟ್ಟುಕೊಂಡಿದ್ದಾರೆ. ಈ ಮಕ್ಕಳು ಈಗ ಮೊಬೈಲ್ಗಿಂತ ಹೆಚ್ಚಿನ ಸಮಯವನ್ನು ಪುಸ್ತಕಗಳ ಓದಿನತ್ತ ವಾಲುತ್ತಿದ್ದಾರೆ.