ಅಹಮದಾಬಾದ್ : ಬಿಲ್ಡರ್ ಓರ್ವನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ, ಬ್ಲ್ಯಾಕ್‌ಮೇಲ್ ಮಾಡಿ ಕೋಟ್ಯಂತರ ರೂ.ಗೆ ನೀಡುವಂತೆ ಬೆದರಿಕೆ ಹಾಕಿ ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಖತರ್ನಾಕ್ ಲೇಡಿಯನ್ನು ಸೂರತ್ ಪೊಲೀಸರು ಅಹಮದಾಬಾದ್‌ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇನ್‌ಫ್ಲ್ಯೂಯೆನ್ಸರ್ ಕೀರ್ತಿ ಪಟೇಲ್ ಎಂದು ಗುರುತಿಸಲಾಗಿದೆ. ಸೋಷಿಯಲ್ ಮೀಡಿಯಾದ ಇನ್‌ಸ್ಟಾಗ್ರಾಂನಲ್ಲಿ 13 ಲಕ್ಷ ಜನ ಅನುಯಾಯಿಗಳನ್ನು ಹೊಂದಿರುವ ಆಕೆ ಸೂರತ್ ನಲ್ಲಿ ಬಿಲ್ಡರ್ ಓರ್ವನನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಗೆ ಬೀಳಿಸಿಕೊಂಡಿದ್ದಳು.
ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾ ಕೋಟ್ಯಂತರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಬೇಸತ್ತ ಬಿಲ್ಡರ್ ಸೂರತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಚಾಲಾಕಿ ಲೇಡಿ ತಲೆ ಮರೆಸಿಕೊಂಡಿದ್ದಾಳೆ.
ಬಿಲ್ಡರ್ ನೀಡಿದ ದೂರಿನ ಮೇರೆಗೆ A1 ಆರೋಪಿಯ ಹೊರತಾಗಿ ನಾಲ್ವರ ಹೆಸರನ್ನು ದೂರಿನಲ್ಲಿ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ, ಈ ವೇಳೆ ಸುಲಿಗೆ ಹಾಗೂ ಭೂಕಬಳಿಕೆಯಲ್ಲೂ ಕೂಡ ಕೀರ್ತಿ ಭಾಗಿಯಾಗಿದ್ದಳು ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಾದ ಸ್ವಲ್ಪ ಸಮಯದ ನಂತರ ಸೂರತ್ ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಅಲ್ಲದೇ ಆರೋಪಿ ಕೀರ್ತಿಯನ್ನು ಆದಷ್ಟು ಬೇಗ ಬಂಧಿಸುವಂತೆ ಆದೇಶಿಸಿತ್ತು. ಅದರಂತೆ ಪೊಲೀಸರು ವಿಶೇಷ ತಂಡ ರಚಿಸಿ ಆಕೆಯ ಪ್ರತಿ ನಡೆಯ ಮೇಲೆ ಕಣ್ಣಿಟ್ಟಿದ್ದರು.
ಆರೋಪಿಯು ಪೊಲೀಸರ ದಾರಿ ತಪ್ಪಿಸುವುದಕ್ಕಾಗಿ ದಿನೇ ದಿನೇ ಊರು ಬದಲಾಯಿಸುತ್ತಿದ್ದಳು, ಆಗಾಗ ಸಿಮ್ ಕಾರ್ಡ್ ಬದಲಾಯಿಸುವುದನ್ನು ಮಾಡುತ್ತಿದ್ದಳು. ಹೀಗಾಗಿ ಸೈಬರ್ ತಂಡಕ್ಕೂ ಸಿಗದೆ ಯಾಮರಿಸುತ್ತಿದ್ದಳು. ಆದರೆ ಕೊನೆಗೆ ಇನ್‌ಸ್ಟಾಗ್ರಾಂ ಸಹಾಯದಿಂದ ಆರೋಪಿಯನ್ನು ಅಹಮದಾಬಾದ್‌ನ ಸರ್ಖೇಜ್ ನಲ್ಲಿ ಬಂಧಿಸಲಾಗಿದೆ.
ಆರೋಪಿಯ ಕಳೆದ 10 ತಿಂಗಳಿನಿಂದ ತಲೆ ಮರೆಸಿಕೊಂಡಿದ್ದು, ಇನ್‌ಸ್ಟಾಗ್ರಾಂ ಸಹಾಯದ ಮೂಲಕ ಆಕೆಯನ್ನು ಕೊನೆಗೂ ಬಂಧಿಸಲಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಈ ಹಿಂದೆ ಏಷ್ಟು ಜನರಿಗೆ ಮೋಸ ಮಾಡಿದ್ದಾಳೆ ಎಂಬುವುದನ್ನು ಬಾಯಿಬಿಡಿಸಲಾಗುತ್ತಿದೆ.