ಚಿತ್ರದುರ್ಗ : ಕರ್ನಾಟಕ ಏಕೀಕರಣದ ನಂತರದ ಮೊದಲ ಸಿಎಂ ಎಸ್ ನಿಜಲಿಂಗಪ್ಪ ಅವರು ವಾಸವಾಗಿದ್ದ ನಿವಾಸವನ್ನು ಅವರ ಕುಟುಂಬಸ್ಥರು ಸುಮಾರು 10 ಕೋಟಿ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ ನಿಜಲಿಂಗಪ್ಪ ಅವರು ಬರೆದಿದ್ದ ಉಯಿಲು ಇದೀಗ ಮನೆ ಮಾರಾಟಕ್ಕೆ ಅಡ್ಡಿಯಾಗಿತ್ತಿದೆ.
ನಿಜಲಿಂಗಪ್ಪನವರ ಪುತ್ರ ಕಿರಣ್ ಶಂಕರ್ ಅವರು ನಿವಾಸವನ್ನು ಸರ್ಕಾರಕ್ಕೆ ಮಾರಾಟ ಮಾಡಲು ಹಲವು ವರ್ಷಗಳಿಂದಲೇ ಪ್ರಯತ್ನಿಸುತ್ತಿದ್ದರು. ಸರ್ಕಾರ ಕೂಡಾ ಆ ಮನೆಯನ್ನು ಕೊಂಡು ಸ್ಮಾರಕ ಮಾಡಲು ನಿರ್ಧರಿಸಿತ್ತು.
ಇದಕ್ಕಾಗಿ ನಾಲ್ಕು ಬಾರಿ ಸಭೆಯನ್ನೂ ನಡೆಸಲಾಗಿತ್ತು. ಆದರೆ ಬಳಿಕ ಸರ್ಕಾರ ಮನೆ ಕೊಳ್ಳಲು ಹಿಂದೇಟು ಹಾಕಿದೆ. ಇದಕ್ಕೆ ಮುಖ್ಯ ಕಾರಣ ನಿಜಲಿಂಗಪ್ಪ ಅವರು ಬರೆದಿದ್ದ ವಿಲ್.
ನಿಜಲಿಂಗಪ್ಪ ಅವರು ಬದುಕಿದ್ದಾಗ ಬರೆದಿದ್ದ ವಿಲ್‌ನಲ್ಲಿ, ಈ ಮನೆಗೆ ಮುಂದಿನ ಉತ್ತರಾಧಿಕಾರಿ ಪುತ್ರ ಕಿರಣ್ ಶಂಕರ್ ಆಗಬೇಕು. ಬಳಿಕ ಮೊಮ್ಮಗ ವಿನಯ್ ಅವರಿಗೆ ಹೋಗಬೇಕು ಎಂದಿದ್ದರು.
ಈ ಕಾರಣಕ್ಕೆ ಸರ್ಕಾರ ಮನೆಯನ್ನು ಕೊಳ್ಳಲು ಹಿಂದೇಟು ಹಾಕಿದೆ. ಮಾತ್ರವಲ್ಲದೇ ಮನೆ ಖಾಸಗಿಯವರ ಪಾಲಾಗುವ ಸಾಧ್ಯತೆಗಳೂ ಹೆಚ್ಚಿದೆ.
ರಿಜಿಸ್ಟ್ರೇಷನ್ ಸಂದರ್ಭ ನಿಜಲಿಂಗಪ್ಪ ಅವರ ಮುಂದಿನ ಪೀಳಿಗೆಯವರು ಎಲ್ಲರೂ ಹಾಜರಿರಬೇಕು. ಮುಖ್ಯವಾಗಿ ಪುತ್ರ ಕಿರಣ್ ಶಂಕರ್ ಹಾಗೂ ಮೊಮ್ಮಗ ವಿನಯ್ ಅವರು ಇರಲೇ ಬೇಕು ಎಂದಿದೆ. ಆದರೆ ವಿನಯ್ ಪ್ರಸ್ತುತ ವಿದೇಶದಲ್ಲಿದ್ದು, ಅವರು ಸದ್ಯ ಮರಳುವ ಸಾಧ್ಯತೆಯಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಮನೆ ಮಾರಾಟ ತಡವಾಗಿದೆ.