ಅಡುಗೆಗೆ ಬಳಸುವ ಎಣ್ಣೆಯನ್ನು ಕಡಿಮೆ ಮಾಡಬೇಕು ಇದರಿಂದ ಬೊಜ್ಜಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದು. ಅಡುಗೆ ಎಣ್ಣೆಯನ್ನು ಖರೀದಿಸುವಾಗಲೇ ಶೇಕಡಾ 10 ರಷ್ಟು ಕಡಿಮೆ ಎಣ್ಣೆಯನ್ನು ಮನೆಗೆ ತನ್ನಿ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆ ಜೊತೆಗೆ ಪ್ರಾಯೋಗಿಕ ಕ್ರಮವಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ನಮ್ಮ ಭವಿಷ್ಯವನ್ನು ಸದೃಢ ಮತ್ತು ರೋಗ ಮುಕ್ತವಾಗಿಸಬಹುದು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಕೈ ಜೋಡಿಸಬೇಕಾಗಿದೆ. ಹಾಗಾದರೆ ಆರೋಗ್ಯಕರ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವುದು ಹೇಗೆ? ಯಾವ ರೀತಿ ಎಣ್ಣೆ ಬೊಜ್ಜಿನ ಸಮಸ್ಯೆಯಿಂದ ನಮ್ಮನ್ನು ದೂರವಿಡುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಬೊಜ್ಜಿನ (Obesity) ಸಮಸ್ಯೆ ಹೆಚ್ಚಳಗೊಂಡಿದ್ದು ಬರುಬರುತ್ತಾ ಈ ಪ್ರಕರಣಗಳ ಪ್ರಮಾಣ ದ್ವಿಗುಣಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬೊಜ್ಜಿನ ವಿರುದ್ಧ ಸಮರ ಸಾರಿದ್ದಾರೆ. ದೇಶದಲ್ಲಿ ಏರುತ್ತಿರುವ ಸ್ಥೂಲಕಾಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಅವರು ಮನ್ಕಿಬಾತ್ನಲ್ಲಿ ಹೇಳಿದಂತೆ ಬೊಜ್ಜಿನ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ಆಹಾರದಲ್ಲಿ ತೈಲ ಬಳಕೆಯನ್ನು ಕಡಿಮೆ ಮಾಡುವ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅದಲ್ಲದೆ ಅಡುಗೆ ಎಣ್ಣೆ ಬಳಕೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸುವಂತೆ ಜನರಿಗೆ ಕರೆ ನೀಡಿದ್ದರು. ಇದು ನಮಗೆ ತಿಳಿದಿರುವ ವಿಚಾರ ಆದರೆ ಈ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು ನಮ್ಮ ಆಹಾರದಲ್ಲಿ ಅಡುಗೆ ಎಣ್ಣೆಯ ಆಯ್ಕೆ ಮತ್ತು ಅವುಗಳ ಬಳಸುವ ಪ್ರಮಾಣದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.




