ಹುಕ್ಕೇರಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಈಗಾಗಲೇ ರೂಪಿಸಿರುವ ಯೋಜನೆಗಳನ್ನು ಜಾರಿಗೆ ತರಲು ಮುಖ್ಯೋಪಾಧ್ಯಾಯರು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಡಿಡಿಪಿಐ ಸೀತಾರಾಮ ಆರ್.ಎಸ್. ಸೂಚಿಸಿದರು.
ತಾಲೂಕಿನ ನಿಡಸೋಸಿ ಎಸ್‌ಜೆಡಿ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ತಯಾರಿಯ ನಿಮಿತ್ಯವಾಗಿ ಶುಕ್ರವಾರ ಆಯೋಜಿಸಿದ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲೂಕಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಮೊಬೈಲ್ ಬಳಸದಂತೆ ಈಗಾಗಲೇ ಸೂಚಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ರೂಪಿಸಿರುವ ಯೋಜನೆಗಳತ್ತ ಶಿಕ್ಷಕರ ಜೊತೆಗೆ ಮಕ್ಕಳ ಪಾಲಕರು ಹೆಚ್ಚಿನ ಮುತುವರ್ಜಿವಹಿಸಿದರೆ ಉತ್ತಮ ಫಲಿತಾಂಶ ಸುಲಭ ಸಾಧ್ಯ ಎಂದು ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಜಿಲ್ಲಾ ಶಿಕ್ಷಣ ಅಧಿಕಾರಿ ಆರೀಪ್ ಬಿರಾದಾರ ಮಾತನಾಡಿ, ಕಾರ‍್ಯಾಗಾರದ ಮೂಲಕ ಪರೀಕ್ಷಾ ಫಲಿತಾಂಶ ಸುಧಾರಣೆ ಕ್ರಮಗಳ ಬಗೆಗೆ ವಿವರಿಸಿದರು.
ಡಯಟ ಪ್ರಾಂಶುಪಾಲ ಸಂಜೀವ ಹುಲ್ಲೋಳಿ, ಎಸ್‌ಜೆಡಿ ಪ್ರೌಢಶಾಲೆಯ ಖ್ಯೋಪಾಧ್ಯಾಯ ಸುನೀಲ ಗಲಗಲಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಎಂ.ಟಿ.ಜನಗೌಡರ, ಸವಿತಾ ಹಲಕಿ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಐ.ಅಮ್ಮಿನಭಾವಿ, ಸುನಿಲ ಖೋತ, ಭರತ ಪಾರ್ಥನಳ್ಳಿ, ಎಸ್‌ಎಸ್‌ಎಲ್‌ಸಿ ತಾಲೂಕು ನೋಡಲ್ ಅಧಿಕಾರಿ ಪ್ರಭು ಬಿರಡಿ ಸೇರಿದಂತೆ ಹುಕ್ಕೇರಿ ತಾಲೂಕಿನ 86 ಪ್ರೌಢಶಾಲೆಗಳ ಮತ್ತು ಚಿಕ್ಕೋಡಿ ತಾಲೂಕಿನ 75 ಪ್ರೌಡಶಾಲೆಗಳ ಮುಖ್ಯಸ್ಥರುಗಳು ಮತ್ತಿತರರು ಉಪಸ್ಥಿತರಿದ್ದರು.




