ಡೆಹ್ರಾಡೂನ್: ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮಾನವನ ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ. ಹಿಮಾಲಯನ್ ಆಸ್ಪತ್ರೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಏಳು ತಿಂಗಳ ಮಗುವಿನ ಹೊಟ್ಟೆ ಬೆಳೆಯುತ್ತಿರುವುದನ್ನು ತಾಯಿ ಗಮನಿಸಿದ್ದು, ಪ್ರಾರಂಭದಲ್ಲಿ ನಿರ್ಲಕ್ಷಿಸಿದ್ದಳು. ಆದರೆ ಹೊಟ್ಟೆಯ ಬೆಳವಣಿಗೆ ಹೆಚ್ಚಾಗುತ್ತಾ ಹೋದಂತೆ ಹಲವು ವೈದ್ಯರನ್ನು ಸಂಪರ್ಕಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಬಳಿಕ ಅವರು ಹಿಮಾಲಯನ್ ಆಸ್ಪತ್ರೆ ಜಾಲಿಗ್ರಾಂಟ್‌ನ ಹಿರಿಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಸಂತೋಷ್ ಸಿಂಗ್ ಅವರನ್ನು ಸಂಪರ್ಕಿಸಿದರು.
ಮಗುವಿನ ಆರಂಭಿಕ ಪರೀಕ್ಷೆಯಲ್ಲಿ ಡಾ. ಸಿಂಗ್ ಹೊಟ್ಟೆಯಲ್ಲಿ ಅಸಹಜ ದ್ರವ್ಯರಾಶಿಯನ್ನು ಶಂಕಿಸಿದ್ದರು. ಆದರೆ ಮಗುವಿನ ಹೊಟ್ಟೆಯೊಳಗೆ ಮಾನವ ಭ್ರೂಣವು ಬೆಳವಣಿಗೆಯಾಗುತ್ತಿರುವುದನ್ನು ಎಕ್ಸ್ ರೇ ಬಹಿರಂಗಪಡಿಸಿತು.
ಈ ಸ್ಥಿತಿಯನ್ನು ವೈದ್ಯಕೀಯವಾಗಿ “ಫೆಟಸ್-ಇನ್-ಫೀಟು” ಎಂದು ಹೇಳಿರುವ ಡಾ. ಸಂತೋಷ್ ಸಿಂಗ್, ಮಗುವಿನ ಪೋಷಕರಿಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡಿ ಶಸ್ತ್ರಚಿಕಿತ್ಸೆ ನಡೆಸಬೇಕಿರುವುದಾಗಿ ತಿಳಿಸಿದರು.
ಕಳೆದ ವಾರ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಭಾಗಶಃ ಅಭಿವೃದ್ಧಿ ಹೊಂದಿದ್ದ ಮಾನವ ಭ್ರೂಣವನ್ನು ಮಗುವಿನ ಹೊಟ್ಟೆಯಿಂದ ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಯ ನಾಲ್ಕು ದಿನಗಳ ಅನಂತರ ಮಗು ಚೇತರಿಸಿಕೊಂಡಿದ್ದು, ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಡಾ. ಸಂತೋಷ್ ಸಿಂಗ್ ತಿಳಿಸಿದ್ದಾರೆ.